ಏಳು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ
ಬೆಂಗಳೂರು: ಮುಂಗಾರು ಚುರುಕುಗೊಂಡಿರುವುದರಿಂದ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಆ.22ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇರುವುದರಿಂದ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.
ಕೊಡಗಿನಲ್ಲಿ ಉತ್ತಮ ಮಳೆ
ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು ಹಾಗೂ ಭಾಗಮಂಡಲದಲ್ಲಿ ಶುಕ್ರವಾರ ಮುಂಜಾನೆ ಉತ್ತಮ ಮಳೆಯಾಗಿದೆ. ಬಳಿಕ ಜಿಲ್ಲೆಯಾದ್ಯಂತ ಸಾಧಾರಣ ಮಳೆ ಸುರಿದಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಹಲವೆಡೆ ಸಾಧಾರಣ ಮಳೆಯಾಗಿದೆ.
ಆಗುಂಬೆ, ತೀರ್ಥಹಳ್ಳಿ ಭಾಗದಲ್ಲಿ ಮಳೆ ಕಡಿಮೆಯಾಗಿರುವ ಕಾರಣ ತುಂಗಾ ಜಲಾಶಯದ ನೀರಿನ ಮಟ್ಟ ತಗ್ಗಿದೆ. 186 ಅಡಿ ನೀರು ಸಂಗ್ರಹ ಸಾಮರ್ಥ್ಯದ ಭದ್ರಾ ಜಲಾಶಯದ ಮಟ್ಟ 181.10 ಅಡಿಗೆ ತಲುಪಿದೆ.
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಶುಕ್ರವಾರ ಮಳೆ ಕ್ಷೀಣಿಸಿದೆ. ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾಗಿದೆ.
ಹುಬ್ಬಳ್ಳಿ: ದಕ್ಷಿಣ ಮಹಾರಾಷ್ಟ್ರದಲ್ಲೂ ಶುಕ್ರವಾರ ಮಳೆಯ ಅಬ್ಬರ ಕಡಿಮೆಯಾಗಿದ್ದು, ಅಲ್ಲಿಂದ ಕೃಷ್ಣಾ ನದಿಗೆ ಹರಿದು ಬರುತ್ತಿದ್ದ ಒಳಹರಿವು ತೀವ್ರಗತಿಯಲ್ಲಿ ಕಡಿಮೆಯಾಗಿದೆ. ತುಂಗಭದ್ರಾ ಜಲಾಶಯದಿಂದ ನೀರು ಹರಿಸುವುದು ಕಡಿಮೆ ಮಾಡಿರುವುದರಿಂದ ನದಿಯಲ್ಲಿ ಹರಿವು ಇಳಿಮುಖಗೊಂಡಿದೆ. ಕಂಪ್ಲಿ-ಗಂಗಾವತಿ ಸೇತುವೆ ಮೇಲೆ ಪುನಃ ವಾಹನ ಸಂಚಾರ ಆರಂಭಗೊಂಡಿದೆ.
ಕಲಬುರ್ಗಿ: ತಾಲ್ಲೂಕಿನ ಭೀಮಳ್ಳಿ ಗ್ರಾಮದ ಬಳಿಯ ಹಳ್ಳದಲ್ಲಿ ಗುರುವಾರ ರಾತ್ರಿ 12 ವರ್ಷದ ಬಾಲಕ ಕೊಚ್ಚಿಕೊಂಡು ಹೋಗಿದ್ದು, ಆತನ ಜೊತೆ ಇದ್ದ 24 ವರ್ಷದ ಯುವಕ ಸಿನಿಮೀಯ ರೀತಿಯಲ್ಲಿ ಪ್ರವಾಹದಿಂದ ಪಾರಾಗಿದ್ದಾರೆ.
ನಗರದ ದುಬೈ ಕಾಲೊನಿ ನಿವಾಸಿ ಮಲ್ಲಿಕಾರ್ಜುನ ನೀಲಕಂಠ ಕುದಮೂಡ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಇವನೊಂದಿಗೆ ಇದ್ದ ಸಂಜಯ ಗಂಧಿ ನಗರದ ನಿವಾಸಿ ವಿಶ್ವಾರಾಧ್ಯ ಸಿದ್ಧಪ್ಪ ಕುಂಬಾರ ಸಿನಿಮೀಯ ರೀತಿ ಪಾರಾಗಿದ್ದಾರೆ.
ಯುವತಿ ಶವ ಪತ್ತೆ
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಮಲಕನಹಳ್ಳಿ ಬಳಿ ಕುಮದ್ವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಶಶಿಕಲಾ ಶಿವಪ್ಪ ಮಾಳಗೇರ (19) ಎಂಬ ಯುವತಿಯ ಮೃತದೇಹ ತುಂಗಭದ್ರಾ ನದಿ ಸೇರುವ ಸ್ಥಳದಲ್ಲಿ ಶುಕ್ರವಾರ ಪತ್ತೆಯಾಗಿದೆ. ಐದು ದಿನಗಳ ಹಿಂದೆ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.