ಬೆಂಗಳೂರು,ಜೂ.25- ಯಾವುದೇ ವೆಚ್ಚವಿಲ್ಲದೆ ನಿರುಪಯುಕ್ತ ವಸ್ತುಗಳನ್ನು ಬಳಸಿ ಸುಲಭವಾಗಿ ಮಳೆಯ ನೀರಿನ ಪ್ರಮಾಣವನ್ನು ಅಳೆಯುವ ಸರಳ ವಿಧಾನವನ್ನು ಪರಿಚಯಿಸಲಾಗಿದೆ.
ಮಳೆ ಬಿದ್ದ ಪ್ರಮಾಣವನ್ನು ತಿಳಿಯಲು ಹವಾಮಾನ ಇಲಾಖೆ ನೀಡುವ ಮಾಹಿತಿಗಾಗಿ ಕಾಯಬೇಕಿಲ್ಲ. ಯಾರ ನೆರವೂ ಇಲ್ಲದೆ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಹಾಗೂ ಜಮೀನಿನಲ್ಲಿ ಬೀಳುವ ಮಳೆಯ ನೀರಿನ ಪ್ರಮಾಣವನ್ನು ಅಳೆಯುವ ಸರಳ ಹಾಗೂ ಸುಲಭ ವಿಧಾನದ ಪ್ರಾತ್ಯಕ್ಷಿಕೆಯನ್ನು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ಪರಿಚಯಿಸಿದ್ದಾರೆ.
ಅವರು ತಮ್ಮ ಮನೆಯ ತಾರಸಿಯಲ್ಲಿ ಕುಡಿಯುವ ನೀರಿನ ಬಾಟಲ್, ಆರು ಇಟ್ಟಿಗೆ ಹಾಗೂ ಹಾಗೂ ಪನಲ್ ಬಳಸಿ ಬೀಳುವ ಮಳೆಯ ನೀರಿನ ಪ್ರಮಾಣವನ್ನು ದಾಖಲಿಸಿದ್ದಾರೆ.
ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನಲ್ಲಿರುವ ತಮ್ಮ ನಿವಾಸದ ತಾರಸಿಯಲ್ಲಿ ಈ ವಿಧಾನ ಅಳವಡಿಸಿಕೊಂಡಿದ್ದಾರೆ. ನಿನ್ನೆಯಿಂದ ಇಂದು ಬೆಳಿಗ್ಗೆ 8.30ಗಂಟೆಗೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ 43.9 ಮಿಮೀ ಮಳೆಯಾಗಿದೆ ಎನ್ನುತ್ತಾರೆ.
ಗಾಳಿಗೆ ಬಾಟಲ್ ಬೀಳದಂತೆ ಹಾಗೂ ಬಾಟಲ್‍ಗೆ ಬಿದ್ದ ಮಳೆ ನೀರು ಆವಿಯಾಗದಂತೆ ಇಟ್ಟಿಗೆ ಬಳಸಲಾಗಿದೆ. ಇದರ ಬದಲು ಪರ್ಯಾಯ ವಸ್ತು ಬಳಸಬಹುದು. 24 ಗಂಟೆಯ ನಂತರ ಬಾಟೆಲ್‍ನಲ್ಲಿರುವ ನೀರನ್ನು ಅಳತೆ ಮಾಡಿದಾಗ ಎಷ್ಟು ಪ್ರಮಾಣದ ಮಳೆಯಾಗಿದೆ ಎಂಬುದು ತಿಳಿಯಲಿದೆ.
ಕೃಷಿ, ತೋಟಗಾರಿಕೆ, ಕುಡಿಯುವ ನೀರು, ಸುಸ್ಥಿರ ಅಭಿವೃದ್ಧಿಯು ಮಳೆಯನ್ನೇ ಅವಲಂಬಿಸಿರುವುದರಿಂದ ಮಳೆ ನೀರಿನ ಪ್ರಮಾಣ ಅರಿಯುವುದು ಅವಶ್ಯಕವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಪ್ರತಿ ಗ್ರಾಪಂ ಮಟ್ಟದಲ್ಲಿ ಈಗಾಗಲೇ ಮಳೆನೀರು ಅಳತೆ ಮಾಡುವ ಮಳೆ ಮಾಪಕಗಳನ್ನು ಅಳವಡಿಸಿದೆ. ಪರ್ಯಾಯವಾಗಿ ಜನರ ಮನೆ ಮತ್ತು ಜಮೀನುಗಳಲ್ಲಿ ಈ ರೀತಿಯ ಮಾಪಕಗಳನ್ನು ಅಳವಡಿಸಿಕೊಂಡರೆ ಅನುಕೂಲವಾಗಲಿದೆ.