ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ರಾಜಕೀಯ ವೈರಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ನೇರವಾಗಿ ಅಖಾಡಕ್ಕೆ ಇಳಿದಿರುವ ಪರಿಣಾಮ ಬೆಳಗಾವಿ ಗ್ರಾಮೀಣ ಕ್ಷೇತ್ರ ಈಗ ಇಡೀ ರಾಜ್ಯದ ಗಮನ ಸೆಳೆದಿದೆ.
ರಮೇಶ್ ಈ ಕ್ಷೇತ್ರದ ಅಭ್ಯರ್ಥಿಯಲ್ಲ.
ಆದರೆ ಹೆಬ್ಟಾಳ್ಕರ್‌ಅವರನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ ಕಾರಣ ಚುಣಾವಣ ಕಣ ರಣರಂಗವಾಗಿ ಬದಲಾಗಿದೆ. ಆರೋಪ-ಪ್ರತ್ಯಾರೋಪ ಪರಾಕಾಷ್ಠೆ ಮುಟ್ಟಿದೆ.
ಕ್ಷೇತ್ರ ಪುನರ್ ವಿಂಗಡಣೆಯಿಂದ 2008ರಲ್ಲಿ ಉದಯವಾದ ಬೆಳಗಾವಿ ಗ್ರಾಮೀಣ ಕ್ಷೇತ್ರ ಆರಂಭದಲ್ಲಿ ಅಷ್ಟು ಹೆಸರು ಮಾಡಿರಲಿಲ್ಲ.
ಪ್ರಮುಖ ಕ್ಷೇತ್ರವಾಗಿ ಸಹ ಗುರುತಿಸಿಕೊಂಡಿರಲಿಲ್ಲ. ಆದರೆ 2018ರಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪ್ರವೇಶದಿಂದ ಕ್ಷೇತ್ರದ ಚಿತ್ರಣವೇ ಬದಲಾಯಿತು. ಇದೇ ರಮೇಶ್ ಜಾರಕಿ ಹೊಳಿ ಆಗ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸಲು ಪ್ರಯತ್ನ ಮಾಡಿ ದ್ದರೆಂಬುದು ಗಮನಿಸಬೇಕಾದ ಸಂಗತಿ. ಅನಂತರದ ದಿನಗಳಲ್ಲಿ ಈ ಕ್ಷೇತ್ರ ಅಭಿವೃದ್ಧಿಯ ಬದಲು ಮತದಾರರಿಗೆ ಉಡುಗೊರೆ ನೀಡುವ ಸಂಸ್ಕೃತಿ ಮೂಲಕ ಜನಪ್ರಿಯ ವಾಯಿತು. ಆವತ್ತಿನಿಂದ ಇವತ್ತಿನವರೆಗೂ ಕ್ಷೇತ್ರದ ಮನೆ ಮನೆಗೆ ಗಿಫ್ಟ್‌ಗಳು ಓಡಾಡುತ್ತಲೇ ಇವೆ. ಹೀಗಾಗಿ ಇದು ಗಿಫ್ಟ್ ಗಳ ಕ್ಷೇತ್ರವೆಂದೇ ಹೆಸರಾಯಿತು.
ಬಿಜೆಪಿ ಟಿಕೆಟ್‌ಗೆ ಪೈಪೋಟಿ: ಈ ಕ್ಷೇತ್ರದಲ್ಲಿ ಇದುವರೆಗೆ ಬಿಜೆಪಿ ಅಭ್ಯರ್ಥಿ ಯಾರೆಂದು ನಿರ್ಧಾರವಾಗಿಲ್ಲ. ನಾಲ್ಕೈದು ಜನರ ಮಧ್ಯೆ ತೀವ್ರ ಪೈಪೋಟಿ ಇದೆ. ಮಾಜಿ ಶಾಸಕ ಸಂಜಯ ಪಾಟೀಲ, ಬೆಳಗಾವಿ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಧನಂಜಯ ಜಾಧವ, ಹಿಂಡಲಗಾ ಗ್ರಾ. ಪಂ. ಅಧ್ಯಕ್ಷ ನಾಗೇಶ ಮುನ್ನೋಳಕರ, ಲಿಂಗಾಯತ ಸಮಾಜಕ್ಕೆ ಸೇರಿದ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ನಿರ್ದೇಶಕಿ ದೀಪಾ ಕುಡಚಿ ಟಿಕೆಟ್‌ಗಾಗಿ ಎಲ್ಲ ಪ್ರಯತ್ನ ನಡೆಸಿದ್ದಾರೆ.
ಆದರೆ ರಮೇಶ್ ಜಾರಕಿಹೊಳಿ ಮಾತ್ರ ತಾವೇ ಈ ಕ್ಷೇತ್ರದ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಕ್ಷೇತ್ರ ಪ್ರವಾಸ ಮಾಡುತ್ತಿದ್ದಾರೆ. ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಸ್ವಾಭಿಮಾನಿ ಸಮಾವೇಶ ಹೆಸರಿನಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದಾರೆ. ಆರೋಪಗಳ ಸುರಿಮಳೆ ಆಗುತ್ತಿದೆ. ಇನ್ನೊಂದು ಕಡೆ ಈ ಬಾರಿಯ ಚುನಾವಣೆಯನ್ನು ಶಾಂತಿ-ಸಮಾಧಾನದಿಂದ ಮಾಡಲು ಬಯಸಿದ್ದೇನೆ ಎಂದು ಈಗಾಗಲೇ ಹೇಳಿರುವ ಹೆಬ್ಬಾಳ್ಕರ್ ತಮ್ಮ ರಾಜಕೀಯ ಬದ್ಧ ವೈರಿ ರಮೇಶ್ ಜಾರಕಿಹೊಳಿ ಅವರ ಆರೋಪಗಳಿಗೆ ಮರು ಆರೋಪ ಮಾಡುವ ಗೋಜಿಗೆ ಹೋಗಿಲ್ಲ. ಎಲ್ಲದಕ್ಕೂ ಅವರ ಮೌನವೇ ಉತ್ತರವಾಗಿದೆ.
ಕಾಂಗ್ರೆಸ್‌ನಿಂದ ಹಾಲಿ ಶಾಸಕರಿಗೆ ಟಿಕೆಟ್ ಎಂದು ಈಗಾಗಲೇ ಹೇಳಿರುವುದರಿಂದ ಹೆಬ್ಬಾಳ್ಕರ್ ಯಾವುದೇ ಆತಂಕವಿಲ್ಲದೆ ಪ್ರಚಾರ ನಡೆಸಿದ್ದಾರೆ. ಜೆಡಿಎಸ್‌ದಿಂದ ಯಾರ ಹೆಸರೂ ಪ್ರಸ್ತಾವವಾಗಿಲ್ಲ.ಮಹಾರಾಷ್ಟ್ರ ಏಕೀಕರಣ ಸಮಿತಿ ಯಿಂದ ಮಾಜಿ ಶಾಸಕ ಮನೋಹರ ಕಿಣೇಕರ ಮತ್ತು ಮಾಜಿ ಮಹಾಪೌರ ಶಿವಾಜಿ ಸುಂಠಕರ ಪ್ರಯತ್ನ ನಡೆಸಿದ್ದಾರೆ.
ಮರಾಠಿ ಭಾಷಿಕರಿಗೆ ಮಣೆ
ಈ ಕ್ಷೇತ್ರದಲ್ಲಿ ಮರಾಠಿ ಭಾಷಿಕರು ನಿರ್ಣಾಯಕರಾಗಿದ್ದಾರೆ. ಅವರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಸಹಜವಾಗಿಯೇ ಬಿಜೆಪಿ ಮರಾಠಿ ಭಾಷಿಕ ಅಭ್ಯರ್ಥಿಗೆ ಮಣೆ ಹಾಕಲು ಉದ್ದೇಶಿಸಿದೆ. ಇದೇ ಕಾರಣದಿಂದ ರಮೇಶ್ ಜಾರಕಿಹೊಳಿ ತಮ್ಮ ಆಪ್ತ ನಾಗೇಶ ಮುನ್ನೋಳಕರ ಅವರ ಹೆಸರು ಮುಂದೆ ಮಾಡಿದ್ದಾರೆ.
ಬಿಜೆಪಿ ಮರಾಠಾ ಅಸ್ತ್ರ ಬಳಸಿ ಕಾಂಗ್ರೆಸ್ ಸದೆ ಬಡಿಯಲು ಎಲ್ಲ ರೀತಿಯ ಕಸರತ್ತು ನಡೆಸಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಶಾಸಕರು ನಿರಂತರ ಜನಸಂಪರ್ಕ ಮತ್ತು ತಾವು ಮಾಡಿದ ಕಾರ್ಯಗಳನ್ನು ನಂಬಿಕೊಂಡಿದ್ದಾರೆ. ಇದರಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ.
ಹಣದ ಹೊಳೆ-ಕಾಣಿಕೆಗಳ ಮಹಾಪೂರ!
ಚುನಾವಣೆ ದಿನಾಂಕ ಘೋಷಣೆಯ ಮೊದಲೇ ರಾಜ್ಯದ ಅತ್ಯಂತ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮತದಾರರ ಎದುರು ಹಣದ ಹೊಳೆ, ಕಾಣಿಕೆಗಳ ಮಹಾಪೂರ ಮತ್ತು ಅಭಿವೃದ್ಧಿ ಕೆಲಸಗಳ ಚಿತ್ರವಿದೆ. ಇದರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಎಲ್ಲರನ್ನೂ ಕಾಡುತ್ತಿದೆ. ಈ ಚುನಾವಣೆಯನ್ನು ಬಹಳ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಹೆಬ್ಟಾಳ್ಕರ್, ವಿರೋಧಿಗಳ ಕಟುವಾದ ಆರೋಪಗಳಿಗೆ ಸಂಯಮದಿಂದಲೇ ಸೂಕ್ಷ್ಮ ಉತ್ತರ ನೀಡುತ್ತಿದ್ದಾರೆ. ಇನ್ನೊಂದು ಕಡೆ ಹೆಬ್ಬಾಳ್ಕರ್ ಅವರನ್ನು ಸೋಲಿಸಲೇ ಬೇಕು ಎಂದು ಪ್ರತಿಜ್ಞೆ ಮಾಡಿದಂತಿರುವ ರಮೇಶ್ ಜಾರಕಿಹೊಳಿ ತಮ್ಮ ಕ್ಷೇತ್ರವಲ್ಲದಿದ್ದರೂ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಅಂತಿಮವಾಗಿ ಯಾರ ಮುಖದಲ್ಲಿ ನಗು ಕಾಣಲಿದೆ ಎಂಬುದು ಕುತೂಹಲ ಮೂಡಿಸಿದೆ.