ಬೆಳಗಾವಿ: ಕುಷ್ಠರೋಗಕ್ಕೆ ಈಗ ಸೂಕ್ತ ಔಷಧೋಪಚಾರವಿದೆ. ಜನರು ಇದಕ್ಕೆ ಭಯ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಕೋಣಿ ಹೆಳಿದರು.
ಸ್ಪರ್ಶ ಕುಷ್ಠರೋಗ ಜಾಗೃತಿ ಅರಿವು ಆಂದೋಲನ- 2023ರ ಅಂಗವಾಗಿ ಆಯೋಜಿಸಿದ ಜಾಗೃತಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಕುಷ್ಠರೋಗದ ವಿರುದ್ಧ ಹೋರಾಡೋಣ ಮತ್ತು ಕುಷ್ಠರೋಗವನ್ನು ಇತಿಹಾಸವಾಗಿಸೋಣ’ ಎಂಬುದು ಈ ಬಾರಿಯ ಘೋಷಣೆಯಾಗಿದೆ’ ಎಂದರು.
ಕುಷ್ಠರೋಗಕ್ಕೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಬಹು ಔಷಧಿ ಚಿಕಿತ್ಸೆ ಉಚಿತವಾಗಿ ಸಿಗುತ್ತದೆ. ಕುಷ್ಠರೋಗದಿಂದ ಉಂಟಾಗುವ ಅಂಗವಿಕಲತೆಗಳ ಬಗ್ಗೆ ನೆರೆ- ಹೊರೆ ವ್ಯಕ್ತಿಗಳಿಗೆ ಸೂಕ್ತ ತಿಳಿವಳಿಕೆ ಅವಶ್ಯ. ಚಿಕಿತ್ಸೆ ನೀಡುವಾಗ ಬೇಧ ಭಾವ ಮಾಡದೆ ಗೌರವಯುತವಾಗಿ ಉಪಚರಿಸಿ ರೋಗಿ ಗುಣಮುಖ ಹೊಂದಲು ಸಹಕರಿಸಿ ಎಂದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ.ಚಾಂದಿನಿ ಜಿ. ದೇವಡಿ ಮಾತನಾಡಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮನ್ವಯದೊಂದಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.