ಬೆಳಗಾವಿ :ಯಕ್ಸಂಬಾ-ರಾಯಬಾಗ ರಸ್ತೆ ಮಧ್ಯೆ ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರನ್ನು ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳು ತಮ್ಮ ವಾಹನದಲ್ಲಿಯೇ ಆಸ್ಪತ್ರೆಗೆ ಸೇರಿಸಿ ಸಮಯಪ್ರಜ್ಞೆಯನ್ನು ಮೆರೆದಿದ್ದಾರೆ.
ಕಬ್ಬು ಕಟಾವು ಕಾರ್ಮಿಕರಾಗಿದ್ದ ಮಹಾರಾಷ್ಟ್ರ ರಾಜ್ಯದ ಉಸ್ಮಾನಾಬಾದ್ ಮೂಲದ ದತ್ತಾ ಎಂಬುವರು ಬೈಕ್ ನಲ್ಲಿ ತೆರಳುವಾಗ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.
ತೀವ್ರ ರಕ್ತಸ್ರಾವದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರೂ ಯಾರೂ ಅವರ ರಕ್ಷಣೆಗೆ ಮುಂದಾಗಿರಲಿಲ್ಲ. ಅದೇ ಮಾರ್ಗದಲ್ಲಿ ರಾಯಬಾಗಕ್ಕೆ ತೆರಳುತ್ತಿದ್ದ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ ಅವರು ತಮ್ಮ ವಾಹನವನ್ನು ನಿಲ್ಲಿಸಿ ಗಾಯಾಳುವಿನ ನೆರವಿಗೆ ಮುಂದಾದರು. ತಮ್ಮ ಸರಕಾರಿ ವಾಹನ ಚಾಲಕ ಹಾಗೂ ಇನ್ನೊಬ್ಬರ ನೆರವಿನಿಂದ ಗಾಯಾಳುವನ್ನು ಚಿಕ್ಕೋಡಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಸಕಾಲದಲ್ಲಿ ಚಿಕಿತ್ಸೆ ಒದಗಿಸಿದರು.
ಈ ಕುರಿತು ಮಾತನಾಡಿದ 2020 ನೇ ಸಾಲಿನ ತಂಡದ ಐ.ಎ.ಎಸ್. ಅಧಿಕಾರಿ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಅವರು, ಇಂತಹ ಘಟನೆಗಳು ನಡೆದಾಗ ಸಾರ್ವಜನಿಕರು ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಸಕಾಲದಲ್ಲಿ ಚಿಕಿತ್ಸೆ ಒದಗಿಸಿದಲ್ಲಿ ಪ್ರಾಣ ರಕ್ಷಿಸಬಹುದು ಎಂದು ಹೇಳಿದರು.
ಗಾಯಾಳು ದತ್ತಾ ಅವರು ಚೇತರಿಸಿಕೊಂಡಿದ್ದು, ಮೆದುಳಿನ ಸಿ.ಟಿ. ಸ್ಕ್ಯಾನ್ ಗಾಗಿ ಬೆಳಗಾವಿಯ ಬಿಮ್ಸ್ ಗೆ ಕಳುಹಿಸಲಾಗಿದೆ ಎಂದು ವಿವರಿಸಿದರು.
Laxmi News 24×7