ನವದೆಹಲಿ: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಿರೀಕ್ಷೆ ಹೊತ್ತು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಎರಡೂವರೆ ಗಂಟೆಗಳ ಕಾಲ ಸಭೆ ನಡೆಸಿದರು. ಆದರೆ ವರಿಷ್ಠರ ಸಮ್ಮತಿ ದೊರೆಯದ ಕಾರಣ, ಸಂಪುಟ ವಿಸ್ತರಣೆ ಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್, ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಭೆಯಲ್ಲಿ ಹಾಜರಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ‘ಸಂಪುಟ ವಿಸ್ತರಣೆ ಬಾಕಿ ಇರುವ ಕುರಿತು ಪಕ್ಷದ ನಾಯಕರಿಗೆ ವಿವರಿಸಿದ್ದೇನೆ. ನನ್ನಿಂದ ಎಲ್ಲ ಮಾಹಿತಿ ಪಡೆದುಕೊಂಡಿರುವ ವರಿಷ್ಠರು, ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ’ ಎಂದರು.
ವರಿಷ್ಠ ನಿರ್ಧಾರವನ್ನು ಯಾವಾಗ ನಿರೀಕ್ಷಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ‘ಇದೇ ಮೊದಲ ಬಾರಿಗೆ ಸಂಪುಟ ವಿಸ್ತರಣೆ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದೇವೆ. ವರಿಷ್ಠರು ಶೀಘ್ರ ನಿರ್ಧಾರ ಕೈಗೊಳ್ಳುವ ಭರವಸೆ ಇದೆ. ಈ ಬಗ್ಗೆ ನಾನು ಸಕಾರಾತ್ಮಕವಾಗಿದ್ದೇನೆ’ ಎಂದು ಹೇಳಿದರು.
Laxmi News 24×7