ಮುಗಳಖೋಡ: ‘ಮಾಳಿ/ ಮಾಲಗಾರದಂತಹ ಸಣ್ಣ ವೃತ್ತಿಪರ ಸಮುದಾಯಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ₹400 ಕೋಟಿ ಅನುದಾನ ಮೀಸಲಿಡಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ನಡೆದ ಅಖಿಲ ಕರ್ನಾಟಕ ಮಾಳಿ/ಮಾಲಗಾರ ಸಮುದಾಯದ ರಾಜ್ಯಮಟ್ಟದ ದ್ವಿತೀಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ಕಂಬಾರ, ಕುಂಬಾರ, ಪತ್ತಾರ, ಕ್ಷೌರಿಕ, ನೇಕಾರ ಸೇರಿದಂತೆ ಹಲವು ಸಣ್ಣ ಸಮಯದಾಯಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಸರ್ಕಾರ ಸದಾ ನಿಮ್ಮೊಂದಿಗೆ ಇರುತ್ತದೆ. ಮುಂದಿನ ದಿನಗಳಲ್ಲಿ ನಿಮ್ಮ ಎಲ್ಲ ಬೇಡಿಕೆ ಈಡೇರಿಸುತ್ತೇನೆ’ ಎಂದು ಭರವಸೆ ನೀಡಿದರು.
‘ಕಡಿಮೆ ಜನಸಂಖ್ಯೆ ಹೊಂದಿದ ಸಣ್ಣ ವೃತ್ತಿಪರ ಸಮುದಾಯಗಳು ರಾಜ್ಯದ ಆರ್ಥಿಕತೆಗೆ ತಮ್ಮದೇಯಾದ ಕೊಡುಗೆ ನೀಡುತ್ತಿವೆ. ಆ ಸಮುದಾಯಗಳಿಗೆ ಮುಂದಿನ ಬಜೆಟ್‌ನಲ್ಲಿ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುವುದು. ಮಾಳಿ/ ಮಾಲಗಾರ ಸಮುದಾಯಗಳ ಅಭಿವೃದ್ಧಿಗೆ ನಿಗಮ ಸ್ಥಾಪಿಸಲಾಗುವುದು. ಅದರ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ, ವಿದ್ಯಾರ್ಥಿವೇತನ ಮತ್ತು ಯುವಕರಿಗೆ ಸ್ವಯಂ ಉದ್ಯೋಗ ನೀಡಲಾಗುವುದು’ ಎಂದು ತಿಳಿಸಿದರು.
ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ‘ತರಕಾರಿ ಬೆಳೆಗಾರರು ಹಾಗೂ ಮಾರಾಟಗಾರರಾದ ಮಾಳಿ ಸಮುದಾಯದವರು ಇಲ್ಲದಿದ್ದರೆ, ನಿತ್ಯ ಜೀವನ ನಡೆಸುವುದು ಕಷ್ಟ’ ಎಂದರು.
ಬಿಜೆಪಿ ಮುಖಂಡ ಮಹಾಂತೇಶ ಕವಟಗಿಮಠ ಮಾತನಾಡಿ, ಬಾಲ್ಯದಿಂದಲೂ ನಾನು ಈ ಮಾಳಿ ಸಮಾಜವನ್ನು ಅತೀ ಸಮೀಪದಿಂದ ನೊಡುತ್ತ ಬಂದಿದ್ದೇನೆ. ಇದು ಮೊದಲಿನಿಂದಲೂ ಕಡು ಬಡತನದಿಂದ ಕೂಡಿದೆ. ಕಾರಣ ನಾವೆಲ್ಲರೂ ಸೇರಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಈ ಸಮಾಜಕ್ಕೆ ಅನುಕೂಲವಾಗಲೆಂದು ನಿಗಮ ಸ್ಥಾಪನೆಗೆ ಶ್ರಮಿಸೋಣ’ ಎಂದರು.