ಬೆಂಗಳೂರು: ಈಗಾಗಲೇ ವಿವಿಧ ಇಲಾಖೆಯ ವರ್ಗಾವಣೆ ಕಡತಗಳನ್ನು ಮುಖ್ಯಮಂತ್ರಿಗಳ ಕಚೇರಿಗೆ ಸಲ್ಲಿಸದಂತೆ ಖಡಕ್ ಸೂಚನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದರು. ಈ ಬೆನ್ನಲ್ಲೇ ಇಂದು ಮತ್ತೆ ಸರ್ಕಾರಿ ನೌಕರರ ವರ್ಗಾವಣೆಗೆ ಸಂಪೂರ್ಣ ಬ್ರೇಕ್ ಹಾಕಿದ್ದಾರೆ.
ಅಲ್ಲದೇ ಸ್ಥಳ ನಿರೀಕ್ಷೆಯಲ್ಲಿದ್ದವರಿಗೆ ಸಚಿವರ ಹಂತದಲ್ಲೇ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದಾರೆ.
ಈ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಲೋಕೋಪಯೋಗಿ, ಜಲಸಂಪನ್ಮೂಲ ಹಾಗೂ ಸಣ್ಣ ನೀರಾವರಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಟಿಪ್ಪಣಿ ಹೊರಡಿಸಿದ್ದಾರೆ.

ಸಿಎಂ ಹೊರಡಿಸಿರುವಂತ ಟಿಪ್ಪಣಿಯಲ್ಲಿ ಈಗಾಗಲೇ ವರ್ಗಾವಣೆ ಅವಧಿ ಮುಕ್ತಾಯಗೊಂಡಿರುವುದರಿಂದ ಹಾಗೂ ಸನಿಹದಲ್ಲಿಯೇ ಅಯವ್ಯಯ ಅಧಿವೇಶನ ಹಾಗೂ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳು ಇರುವುದರಿಂದ, ಈ ಹಂತದಲ್ಲಿ ಯಾವುದೇ ವರ್ಗಾವಣೆ, ನಿಯೋಜನೆ ಪ್ರಸ್ತಾವನೆಗಳನ್ನು ಸಲ್ಲಿಸದೇ ಇರುವಂತೆ ಸೂಚಿಸಿದ್ದಾರೆ.
ಇನ್ನೂ ಸ್ಥಳ ನಿರೀಕ್ಷೆಯಲ್ಲಿರುವವರಿಗೆ ಖಾಲಿ ಹುದ್ದೆಗಳಿಗೆ ಸ್ಥಳ ನಿಯುಕ್ತಿ ಪ್ರಸ್ತಾವನೆಗಳನ್ನು ಸಚಿವರ ಹಂತದಲ್ಲಿಯೇ ಕೈಗೊಳ್ಳಲು ಸಹ ಸೂಚನೆ ನೀಡಿದ್ದಾರೆ.
Laxmi News 24×7