ಬೆಳಗಾವಿ: ಕಳಂಕಿತರಾಗಿಯೇ ಮುಂದಿನ ಚುನಾವಣೆ ಎದುರಿಸಲು ಸಿದ್ಧರಿಲ್ಲದವರ ಧ್ವನಿಗೆ ಬಿಜೆಪಿ ವರಿಷ್ಠರು ಓಗೊಟ್ಟಿದ್ದು, ಜನವರಿ ಮೊದಲ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸಜ್ಜಾಗಿದ್ದಾರೆ. ಈ ಕುರಿತು ಸ್ಪಷ್ಟ ಸುಳಿವು ಲಭಿಸಿದ ಕಾರಣಕ್ಕೆ ಮಾಜಿ ಸಚಿವ ಕೆ.ಎಸ್.
ಈಶ್ವರಪ್ಪ ದನಿಯಲ್ಲಿ ದಿಢೀರ್ ಬದಲಾವಣೆಯಾಗಿದ್ದು, ರಮೇಶ ಜಾರಕಿಹೊಳಿಗೂ ಭರವಸೆ ಸಿಕ್ಕಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಆರೋಪಮುಕ್ತರಾಗಿರುವ ಕಾರಣ ಸಂಪುಟಕ್ಕೆ ಮತ್ತೆ ಸೇರಿಸಿಕೊಂಡು ಕಳಂಕದಿಂದ ಪಾರುಮಾಡಿ ಎನ್ನುವುದು ಈಶ್ವರಪ್ಪ ಹಾಗೂ ಜಾರಕಿಹೊಳಿ ವಾದವಾಗಿದೆ. ಎದುರಾಳಿಗಳ ಟೀಕೆ-ಟಿಪ್ಪಣಿ, ಗೇಲಿಯಿಂದ ತಪ್ಪಿಸಿಕೊಳ್ಳಬೇಕು; ಕ್ಷೇತ್ರದಲ್ಲಿ ಪ್ರತಿಷ್ಠೆ, ಘನತೆ-ಗೌರವ ಉಳಿಸಿಕೊಳ್ಳಬೇಕು ಎಂಬುದು ನಾಯಕರಿಬ್ಬರ ಸಚಿವ ಪದವಿ ಧಾವಂತಕ್ಕೆ ಮೂಲ ಕಾರಣ. ಸಚಿವ ಸಂಪುಟಕ್ಕೆ ಇಬ್ಬರೂ ಸೇರಬಯಸಿದ ಉದ್ದೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವರಿಷ್ಠರ ತಂತ್ರಗಾರಿಕೆ: ಹಿಮಾಚಲಪ್ರದೇಶ, ಗುಜರಾತ್ ವಿಧಾನಸಭೆ ಚುನಾವಣೆ ಮುಗಿದ ನಂತರ ಕರ್ನಾಟಕದತ್ತ ದೆಹಲಿ ನಾಯಕರು ಗಮನಹರಿಸಿದ್ದು, ತಂತ್ರಗಾರಿಕೆ ಹೆಣೆಯುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕ್ಲೀನ್ ಚಿಟ್ ನೀಡಿದ ಮೇಲೂ ಸಚಿವ ಪದವಿ ನೀಡಿಲ್ಲವೆಂದು ಈಶ್ವರಪ್ಪ, ರಮೇಶ್ ಜಾರಕಿಹೊಳಿ ಅಧಿವೇಶನದಿಂದ ದೂರ ಉಳಿದಿರುವ ಮಾಹಿತಿ ರವಾನೆಯಾಗಿದೆ. ಅದರಲ್ಲೂ ಈಶ್ವರಪ್ಪ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಬೊಮ್ಮಾಯಿ ವಿರುದ್ಧ ಸೌಮ್ಯ ಪ್ರತಿಭಟನೆಗೂ ಇಳಿದಿರುವುದು ನಿಚ್ಚಳವಾಗಿದೆ. ಈ ಬೆಳವಣಿಗೆ ಮುಂದಿನ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದನ್ನು ತಪ್ಪಿಸುವ ತಂತ್ರವಾಗಿ ಸಂಪುಟ ವಿಸ್ತರಣೆಗೆ ಒಲವು ತೋರಿದ್ದಾರೆ ಎನ್ನಲಾಗಿದೆ. ಸಂಪುಟದಲ್ಲಿ ಒಟ್ಟು ಆರು ಸ್ಥಾನಗಳು ಖಾಲಿ ಉಳಿದಿದ್ದು, ಬೊಮ್ಮಾಯಿ ಮೇಲೆ ಬಿದ್ದಿರುವ ಹೆಚ್ಚುವರಿ ಹೊರೆ ಇಳಿಸುವುದಕ್ಕೂ ಮುಂದಾಗಿದ್ದಾರೆ. ಸಚಿವ ಪದವಿ ಅಲ್ಪಾವಧಿಯೇ ಆದರೂ ಈಶ್ವರಪ್ಪ, ಜಾರಕಿಹೊಳಿ ಜತೆಗೆ ಇನ್ನೂ ನಾಲ್ವರನ್ನು ಸಚಿವ ಸಂಪುಟಕ್ಕೆ ಸೇರಿಸಿ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆಗಳಿವೆ ಎಂದು ತಿಳಿದಿದೆ.