ಮುಂಬೈ: ಸೋಮವಾರದಿಂದ ನಾಗ್ಪುರದಲ್ಲಿ ಆರಂಭವಾಗಲಿರುವ ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ ಅವರ ಹೇಳಿಕೆ ಪ್ರತಿಧ್ವನಿಸುವ ನಿರೀಕ್ಷೆ ಇದೆ.
“ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಲಾಗುವುದು,’ ಎಂದು ಡಿಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಇದೇ ವೇಳೆ, “ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆಸಿರುವ ಮಾತುಕತೆಯನ್ನು ಸಾರ್ವಜನಿಕಗೊಳಿಸಬೇಕು,’ ಎಂದು ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷ ನಾಯಕ ಅಜಿತ್ ಪವಾರ್ ಒತ್ತಾಯಿಸಿದ್ದಾರೆ. ಡಿ.30ರವರೆಗೆ ಅಧಿವೇಶನ ನಡೆಯಲಿದೆ.
ರಷ್ಯಾ-ಉಕ್ರೇನ್ ನಡುವಿನ ಯುದ್ಧ ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುತ್ತಾರೆ. ಆದರೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಾರೆ. ಇದು ಒಳ್ಳೆಯ ರಾಜಕಾರಣಿಯ ಲಕ್ಷಣವಲ್ಲ.
– ಸಂಜಯ್ ರಾವತ್, ಶಿವಸೇನೆ ಸಂಸದ