ಬೆಂಗಳೂರು: ಕೆಲ ರೌಡಿಗಳು ಬಿಜೆಪಿ ಸೇರುತ್ತಾರೆ ಎಂಬ ವಿಷಯ ರಾಜಕೀಯ ವಲಯದಲ್ಲಿ ಇತ್ತೀಚೆಗೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ರೌಡಿ ಮೋರ್ಚಾ ಹೆಸರಿನ ವೆಬ್ ಸೈಟ್ ಆರಂಭವಾಗಿದೆ.
ಅನಾಮಿಕರುಈ ವೆಬ್ ಸೈಟ್ ಆರಂಭಿಸಿದ್ದು, ರೌಡಿಗಳಾದ ಸೈಲೆಂಟ್ ಸುನೀಲ್, ವಿಲ್ಸನ್ ಗಾರ್ಡನ್ ನಾಗ, ಫೈಟರ್ ರವಿ ಹಾಗೂ ಬೆತ್ತನಗೆರೆ ಶಂಕರ ಸೇರಿದಂತೆ ಹಲವರ ಹೆಸರು ಬಿಜೆಪಿಯಿಂದ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳು ಹಾಗೂ ಅವರ ಸಾಧನೆಗಳ ಬಗ್ಗೆ ನಮೂದಿಸಲಾಗಿದೆ.
ಚುನಾವಣೆ ಹತ್ತಿರ ಬರುತ್ತಿದೆ, ಜನರು ನಮ್ಮಿಂದ ದೂರ ಹೋಗುತ್ತಿದ್ದಾರೆ, ಆಪರೇಷನ್ ಕಮಲ ಮಾಡಿದ್ರೂ ಗೆಲ್ಲುವುದು ಗ್ಯಾರಂಟಿ ಇಲ್ಲದ ಕಾರಣ ‘ಬಿಜೆಪಿ ರೌಡಿ ಮೋರ್ಚಾ’ ಸ್ಥಾಪಿಸುವುದಕ್ಕಾಗಿ ‘ಆಪರೇಷನ್ ರೌಡಿ ಶೀಟರ್’ ಪ್ರಾರಂಭಿಸಿದ್ದೇವೆ ಎಂದು ಪೋಸ್ಟ್ ಮಾಡಿ ವೆಬ್ ಸೈಟ್ ನಲ್ಲಿ ಹರಿಬಿಡಲಾಗಿದೆ. ಈ ಬಗ್ಗೆ ಯಾವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.
ಸೈಲೆಂಟ್ ಸುನೀಲ್ಸಾಧನೆಗಳು- ಪೊಲೀಸ್ ಪೇದೆ ಮರ್ಡರ್ ಕೇಸ್ ಸೇರಿದಂತೆ 17 ಕೊಲೆ, ದರೋಡೆ ಮತ್ತು ಸುಲಿಗೆ ಆರೋಪಗಳು, ವಿಲ್ಸನ್ ಗಾರ್ಡನ್ ನಾಗ ಸಾಧನೆಗಳು-ಕೊಲೆ ಕೇಸುಗಳು ಸೇರಿದಂತೆ ಗ್ಯಾಂಗ್ ವಾರ್ ಗಳಲ್ಲಿ ಭಾಗಿ ಹೀಗೆ ಕೆಲ ರೌಡಿಶೀಟರ್ ಗಳ ಹೆಸರು ಮತ್ತು ಅವರ ಮೇಲಿರುವ ಆರೋಪಗಳ ಬಗ್ಗೆ ಬರೆದು ಪೋಸ್ಟರ್ ಹಾಕಲಾಗಿದೆ.
ಜೊತೆಗೆ ಈ ಪೋಸ್ಟರ್ ನಲ್ಲಿ ಬಿಜೆಪಿ ಪಕ್ಷದ ಚಿಹ್ನೆಯನ್ನು ಉಲ್ಟಾ ಬರೆಯಲಾಗಿದ್ದು, ಅದರಲ್ಲಿ ಕಮಲದ ದಳ ಕೆಳಗೆ ಬೀಳುತ್ತಿರುವಂತೆ ಮುದ್ರಣ ಮಾಡಲಾಗಿದೆ.