ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಾಂಚಜನ್ಯ ಮೊಳಗಿಸಿದೆ. ರಾಯಚೂರು ಜಿಲ್ಲೆಯಿಂದಲೇ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮತಬೇಟೆ ಆರಂಭಿಸಿದೆ.
ರಾಯಚೂರಿನ ಗಿಲ್ಲೆಸಗೂರಿನಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್.
ಯಡಿಯೂರಪ್ಪ, ನಿಮ್ಮ ಹಗರಣಗಳನ್ನೆಲ್ಲ ಬಯಲು ಮಾಡುತ್ತೇವೆ. ನಿಮ್ಮ ಯೋಗ್ಯತೆಗಳನ್ನು ಜನರ ಮುಂದೆ ಇಡುತ್ತೇವೆ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಹಗರಣಗಳನ್ನು ಬಯಲು ಮಾಡುತ್ತೇವೆ. ಪ್ರಧಾನಿ ಮೋದಿಯವರ ಬಗ್ಗೆಯೂ ಟೀಕೆ ಮಾಡುತ್ತೀರಾ ? ಅವರ ಕಾಲು ಬುಡದಲ್ಲಿ ಕೂರೋ ಯೋಗ್ಯತೆಯೂ ನಿಮಗಿಲ್ಲ. ರಾಬರ್ಟ್ ವಾದ್ರ ವಿರುದ್ಧದ ಹಗರಣಗಳ ಪಟ್ಟಿ ಇದೆಯೇ ? ನ್ಯಾಷನಲ್ ಹೆರಾಲ್ಡ್ ಹಗರಣ ಯಾರಿಗೆ ಗೊತ್ತಿಲ್ಲ ? ಹಗರಣಗಳನ್ನೇ ಮಾಡದ ಪ್ರಧಾನಿ ಬಗ್ಗೆ ಮಾತನಾಡುತ್ತೀರಾ ? 25 ಲಕ್ಷ ಹ್ಯೂಬ್ಲೆಟ್ ವಾಚ್ ಕೊಟ್ಟಿದ್ಯಾರು ? ನಿಮ್ಮ ಹಗರಣಗಳ ಬಗ್ಗೆ ತನಿಖೆ ಮಾಡಿಸಿ ನಿಮ್ಮನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲಿ ನಿಲ್ಲಿಸುತ್ತೇವೆ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.
ರಾಹುಲ್ ಗಾಂಧಿ ಇನ್ನೂ ಬಚ್ಚಾ, ಭಾರತ್ ಜೋಡೋ ಯಾತ್ರೆ ಬಿಜೆಪಿಯ ಮೇಲೆ ಹಾಗೂ ರಾಜ್ಯ ರಾಜಕೀಯದ ಮೇಲೆ ಯಾವುದೇ ಪರಿಣಾಮಗಳನ್ನು ಬೀರಲ್ಲ ಎಂದು ಹೇಳಿದರು.