ಬೆಂಗಳೂರು: ಕಾಂಗ್ರೆಸ್ನ ಸೋಷಿಯಲ್ ಮೀಡಿಯಾ ಚೀಫ್ ಬಿ.ಆರ್ ನಾಯ್ಡು ಹಾಗೂ ಅರುಣ್ ಎನ್ನುವವರನ್ನು ಬುಧವಾರ ತಡರಾತ್ರಿ ಪೊಲೀಸರು ಬಂಧಿಸಿರುವುದು ಮೇಲ್ಮನೆಯಲ್ಲಿ ಗುರುವಾರ ವಾಗ್ವಾದ, ಗದ್ದಲಕ್ಕೆ ಕಾರಣವಾಯಿತು.
ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಪದೇ ಪದೇ ವಿನಂತಿಸಿದರೂ ಕಾಂಗ್ರೆಸ್ನವರ ಧರಣಿ, ಎರಡೂ ಕಡೆಯವರ ಪರ-ವಿರೋಧ ಧಿಕ್ಕಾರದ ಮೊಳಗು, ಮಾತಿನ ಚಕಮಕಿ ನಿಲ್ಲಲಿಲ್ಲ.
ಇದರಿಂದಾಗಿ ಕಲಾಪವನ್ನು 10 ನಿಮಿಷ ಮುಂದೂಡಿದರು.
ಸದನ ಸೇರುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಿಷಯ ಪ್ರಸ್ತಾಪಿಸಿ, ಕಾಂಗ್ರೆಸ್ಗೊಂದು ಬಿಜೆಪಿಗೊಂದು ಕಾನೂನೇ, ಚರ್ಚೆಗೆ ಅವಕಾಶ ಕೊಡಿ ಎಂದು ಪಟ್ಟು ಹಿಡಿದರು.
ಸದನದ ಕಾರ್ಯವಿಧಾನದಂತೆ ಮೊದಲಿಗೆ ಪ್ರಶ್ನೋತ್ತರ ನಡೆಯಲಿ ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಆಡಳಿತ ಪಕ್ಷದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣ ಸ್ವಾಮಿ ಹೇಳುದರೆ, ತೇಜಸ್ವಿನಿಗೌಡ ಅವರು ಕಾನೂನು ಎಲ್ಲರಿಗೂ ಒಂದೇ ಎಂದರು.
ಕಾಂಗ್ರೆಸ್ ನವರು ಪಟ್ಟು ಬಿಡಲಿಲ್ಲ. ನೋಟಿಸ್ ಕೊಡಿ ಎಂಬ ಸಭಾಪತಿ ಸಲಹೆ ಕೇಳಲಿಲ್ಲ. ಪ್ರತಿಪಕ್ಷ ನಾಯಕ ಹರಿಪ್ರಸಾದ್ ಮತ್ತು ಆಡಳಿತ ಪಕ್ಷದ ಸದಸ್ಯರ ಮಧ್ಯೆ ಹೇಡಿಗಳು, ರಣಹೇಡಿಗಳು ಎಂಬ ಪರಸ್ಪರ ತಿವಿತ ನಡೆದರೆ, ಕಾಂಗ್ರೆಸ್ ನ ಸದಸ್ಯರು ಸಭಾಪತಿ ಪೀಠದ ಮುಂದೆ ಧಾವಿಸಿ ಧರಣಿ ಹೂಡಿದರು.