ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭೇಟಿ ಸಂದರ್ಭದಲ್ಲಿ ಆರು ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಿದ ರಸ್ತೆ ಮೂರೇ ದಿನದಲ್ಲಿ ಕಿತ್ತು ಹೋಗಿರುವುದು ಸಿಎಂ ಬಸವರಾಜ್ ಬೊಮ್ಮಾಯಿ ಅವರ ” ಕಾಮನ್ ಮ್ಯಾನ್ ಸಿಎಂ” ಖ್ಯಾತಿಗೆ ಈಗ ಕಳಂಕ ತಂದಿದೆ.
ಸಿಎಂ ಬೊಮ್ಮಾಯಿ ದಿಲ್ಲಿಯಲ್ಲಿ ಇರುವಾಗಲೇ ಈ ಕಳಪೆ ಕಾಮಗಾರಿ ಬಗ್ಗೆ ಪ್ರಧಾನಿ ಕಾರ್ಯಾಲಯ ಸ್ಪಷ್ಟನೆ ಕೇಳಿದೆ. ತಮ್ಮ ಬೆಂಗಳೂರು ಭೇಟಿ ಸಂದರ್ಭದಲ್ಲಿ ಬೊಮ್ಮಾಯಿ ಅವರನ್ನು ” ಜನಪ್ರಿಯ ಮುಖ್ಯಮಂತ್ರಿ” ಎಂದು ಪ್ರಶಂಸಿದ್ದ ಪ್ರಧಾನಿ ಮೋದಿಯವರ ಕಚೇರಿಯಿಂದ ಕಳಪೆ ಕಾಮಗಾರಿಗಾಗಿ ಈಗ ಸ್ಪಷ್ಟನೆ ಕೇಳಿರುವುದು ಜನಪ್ರಿಯತೆ ಹಾಗೂ ಜನಸಾಮಾನ್ಯರ ಪರವಾದ ಬದ್ಧತೆ ಎರಡೂ ವಿಚಾರದಲ್ಲೂ ಪ್ರಶ್ನೆ ಮೂಡುವಂತಾಗಿದೆ.
ಬೆಂಗಳೂರು ನಗರದ ಬಹುತೇಕ ರಸ್ತೆಗಳು ಗುಂಡಿ ಬಿದ್ದು ವಾಹನ ಸವಾರರಿಗೆ ನರಕ ದರ್ಶನ ಮಾಡುತ್ತಿದ್ದರೂ ಕಾಮನ್ ಮ್ಯಾನ್ ಸಿಎಂ ಬಸವರಾಜ್ ಬೊಮ್ಮಾಯಿ ಆಡಳಿತ ಅದಕ್ಕೆ ಸ್ಪಂದಿಸಿರಲಿಲ್ಲ. ಬೆಂಗಳೂರು ಉಸ್ತುವಾರಿಯ ಹೊಣೆ ಖುದ್ದು ಹೊತ್ತಿದ್ದರೂ ಬಿಬಿಎಂಪಿಯನ್ನು ಜವಾಬ್ದಾರಿಯ ಹಾದಿಯಲ್ಲಿ ಪಳಗಿಸುವಲ್ಲಿ ಬೊಮ್ಮಾಯಿ ವಿಫಲರಾಗಿದ್ದರು.
ಆದರೆ 33 ಸಾವಿರ ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳ ಶಂಕು ಸ್ಥಾಪನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಬೇಸ್ ಕ್ಯಾಂಪ್ ಉದ್ಘಾಟನೆಗೆ ಬಂದ ಪ್ರಧಾನಿ ಮೋದಿ ಸಂಚಾರ ಮಾಡುವ ರಸ್ತೆಯ ಗುಂಡಿ ಮುಚ್ಚುವುದಕ್ಕೆ ಬಿಬಿಎಂಪಿ ಯುದ್ಧೋಪಾದಿಯಲ್ಲಿ ಸಿದ್ಧತೆ ನಡೆಸಿತ್ತು. ಒಟ್ಟಾರೆ 24 ಕೋಟಿ ರೂ.ಮೂಲಸೌಕರ್ಯ ರಿಪೇರಿ ಕಾರ್ಯಕ್ಕೆ ವಿನಿಯೋಗಿಸಲಾಗಿತ್ತು.
Laxmi News 24×7