Breaking News

ಮದ್ಯದಂಗಡಿಗೆ ಮಂಥ್ಲಿ ಫಿಕ್ಸ್: ಅಬಕಾರಿ ಇಲಾಖೆಯಲ್ಲಿ ಲಂಚಾವತಾರ; ಎಲ್ಲರಿಗೂ ಪಾಲು..

Spread the love

ಬೆಂಗಳೂರು :ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ 40 ಪರ್ಸೆಂಟ್ ಕಮೀಷನ್ ಆರೋಪಗಳ ಬೆನ್ನಲ್ಲೇ, ಸರ್ಕಾರದ ಖಜಾನೆಯ ಪ್ರಮುಖ ಸಂಪನ್ಮೂಲವಾಗಿರುವ ಅಬಕಾರಿ ಇಲಾಖೆಯಲ್ಲಿ ‘ಮಂಥ್ಲಿ ಮನಿ’ ಅಲಿಖಿತ ನಿಯಮವಾಗಿ ಮಾರ್ಪಟ್ಟಿದೆಯೆಂಬ ಮಾತು ಜೋರಾಗಿ ಕೇಳಿಬರುತ್ತಿದೆ.

ರಾಜ್ಯದಲ್ಲಿರುವ ಪ್ರತಿಯೊಂದು ಮದ್ಯದಂಗಡಿಗೂ ‘ತಿಂಗಳ ವಂತಿಕೆ’ ಕಡ್ಡಾಯವಾಗಿದೆ. ಇದು ಇಲಾಖೆಯ ಇತರ ಲಂಚ-ರುಷುವತ್ತುಗಳಿಗೆ ಹೊರತಾದ ಮೊತ್ತ..!

ಕೆಳಹಂತದ ಸಿಬ್ಬಂದಿಯಿಂದ ಹಿಡಿದು ಮೇಲಿನ ಅಧಿಕಾರಿಗಳವರೆಗೂ ಇದರಲ್ಲಿ ಪಾಲಿದೆ. ಒಂದೊಂದು ಜಿಲ್ಲೆಗೆ ಒಂದೊಂದು ರೀತಿ ಮಂಥ್ಲಿ ಮನಿ ಫಿಕ್ಸ್ ಮಾಡಲಾಗಿದೆ. ಇದೆಲ್ಲವನ್ನು ಮೀರಿಸುವಂತೆ, ಹೋಟೆಲ್ ಮತ್ತು ವಸತಿಗೃಹದಲ್ಲಿ ಮದ್ಯದ ಪರವಾನಗಿಗೆ (ಸಿಎಲ್-7) ಲೈಸೆನ್ಸ್ ಪಡೆಯಬೇಕಾದರೆ ಪ್ರಸ್ತುತ ನಿಗದಿಯಾಗಿರುವ ಲಂಚದ ಬಾಬತ್ತು 80 ಲಕ್ಷ ರೂ. ಎನ್ನುತ್ತಾರೆ ಬಲ್ಲವರು.

ರಾಜ್ಯದಲ್ಲಿ 3,921 ವೈನ್​ಶಾಪ್(ಸಿಎಲ್2), 3,622 ಬಾರ್ ಆಂಡ್ ರೆಸ್ಟೋರೆಂಟ್(ಸಿಎಲ್9), 1,729 ಹೋಟೆಲ್ ಮತ್ತು ವಸತಿಗೃಹ (ಸಿಎಲ್7) ಹಾಗೂ ಮದ್ಯದ ಪರವಾನಗಿ ಪಡೆದ 265 ಕ್ಲಬ್​ಗಳಿವೆ. ಬೆಂಗಳೂರಿನ ವಿಭಾಗದ ಪ್ರತಿ ಮದ್ಯದಂಗಡಿಗೆ 18 ರಿಂದ 20 ಸಾವಿರ ರೂ. ಇದ್ದರೆ, ಮೈಸೂರು ಮತ್ತು ಬೆಳಗಾವಿ ವಿಭಾಗದಲ್ಲಿ 12 ರಿಂದ 15 ಸಾವಿರ ರೂ. ಇದೆ. ಕಲಬುರಗಿ ಮತ್ತು ಹೊಸಪೇಟೆ ವಿಭಾಗದಲ್ಲಿ 10 ರಿಂದ 12 ಸಾವಿರ ರೂ. ಹಾಗೂ ಮಂಗಳೂರು ವಿಭಾಗದಲ್ಲಿ ಅಂದಾಜು 10 ಸಾವಿರ ರೂ. ಮಂಥ್ಲಿ ಮನಿ ನೇರವಾಗಿ ಅಧಿಕಾರಿಗಳಿಗೆ ಸಂದಾಯವಾಗುತ್ತದೆ. ಕೆಲವೆಡೆ, ಹೆಚ್ಚು ವ್ಯಾಪಾರ ನಡೆಯುವ ಮದ್ಯದಂಗಡಿಗಳಿಗೆ ಹೆಚ್ಚು ಹಣ ನಿಗದಿಪಡಿಸಲಾಗಿದೆ. ಅಬಕಾರಿ ಇಲಾಖೆಯಲ್ಲಿ ಲಂಚ ಕೊಟ್ಟರೆ ಎಲ್ಲ ನಡೆಯುತ್ತೆ, ಇಲ್ಲದಿದ್ದರೆ ಯಾವ ಕೆಲಸವೂ ಆಗಲ್ಲ ಎಂಬ ವಿಚಾರವನ್ನು ಮಹಿಳಾ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದರು.

ಕಿರಿಯ ಅಧಿಕಾರಿ ಜತೆ ಮಾತನಾಡಿದ್ದ ಆ ಮಹಿಳಾ ಅಧಿಕಾರಿಯ ಆಡಿಯೋ ಕೆಲ ತಿಂಗಳ ಹಿಂದೆ ಬಿಡುಗಡೆಯಾಗಿತ್ತು. ಅಬಕಾರಿ ಸಚಿವರಿಗೆ ಪ್ರತಿ ಜಿಲ್ಲೆಯಿಂದ 5 ಲಕ್ಷ ರೂ. ಲಂಚ ನೀಡಬೇಕು ಎಂದು ಆಡಿಯೋದಲ್ಲಿ ಹೇಳಿದ್ದರು. ಇದು ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಆದರೆ, ಅಬಕಾರಿ ಇಲಾಖೆಯಲ್ಲಿನ ವಾಸ್ತವವನ್ನು ಆಡಿಯೋ ಬಹಿರಂಗಪಡಿಸಿತ್ತು ಎಂಬುದಂತೂ ನಿಜ.

ನವೀಕರಣ ಸೀಸನ್: ಪ್ರತಿವರ್ಷ ಜೂನ್ ಮತ್ತು ಜುಲೈನಲ್ಲಿ ಎಂಆರ್​ಪಿ ಮಳಿಗೆ ಹಾಗೂ ಬಾರ್ ಆಂಡ್ ರೆಸ್ಟೋರೆಂಟ್​ಗಳ ಪರವಾನಗಿ ನವೀಕರಣ ಪಕ್ರಿಯೆ ಇರುತ್ತದೆ. ಈ ವರ್ಷ ಲೈಸೆನ್ಸ್ ನವೀಕರಣಕ್ಕೆ ಪ್ರತಿ ಮಳಿಗೆಗೆ 53 ಸಾವಿರ ರೂ. ಲಂಚ ನಿಗದಿಪಡಿಸಲಾಗಿದ್ದು, ಇದಕ್ಕೆ ಮದ್ಯದಂಗಡಿಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಹಾಗೂ ಅದಕ್ಕಿಂತ ಮುಂಚೆ ಪ್ರತಿ ಮಳಿಗೆಗೆ 20 ರಿಂದ 25 ಸಾವಿರ ರೂ. ಪಡೆಯಲಾಗುತ್ತಿತ್ತು. ಕಳೆದ 2 ವರ್ಷಗಳಲ್ಲಿ 377 ಹೋಟೆಲ್ ಮತ್ತು ವಸತಿಗೃಹ (ಸಿಎಲ್7) ತೆರೆಯಲು ಅನುಮತಿ ನೀಡಲಾಗಿದೆ. ಒಂದು ಸಿಎಲ್-7 ಆರಂಭಿಸಲು ಕೆಳಹಂತದ ಅಧಿಕಾರಿಗಳಿಂದ ಹಿಡಿದು ಮೇಲಿನವರೆಗೆ 60 ರಿಂದ 80 ಲಕ್ಷ ರೂ.ವರೆಗೆ ಲಂಚ ನೀಡಬೇಕಾಗುತ್ತದೆ ಎಂಬುದು ಪರವಾನಗಿಗೆ ಪ್ರಯತ್ನಿಸಿದ್ದ ವ್ಯಕ್ತಿಯೊಬ್ಬರಿಗೆ ಅರಿವಾದ ಸತ್ಯ.

ಎಸಿಬಿ ಟ್ರ್ಯಾಪ್​: ಇತ್ತೀಚಿಗಷ್ಟೇ ಚಿತ್ರದುರ್ಗ ಅಬಕಾರಿ ಡಿಸಿ ಪರವಾನಗಿ ನವೀಕರಣಕ್ಕೆ ಹಾಗೂ ಬೆಂಗಳೂರಿನ ಕೆಂಗೇರಿ ವಲಯದ ಅಬಕಾರಿ ಇನ್​ಸ್ಪೆಕ್ಟರ್ ಮಂಜುನಾಥ್ ಸಿಎಲ್7 ಮದ್ಯದಂಗಡಿ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದರು. ಹಿಂದೆಯೂ ಹಲವು ಅಬಕಾರಿ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿರುವ ಪ್ರಕರಣಗಳು ವರದಿಯಾಗಿವೆ.

ಮೇಲ್ದರ್ಜೆ-ಕೆಳದರ್ಜೆ ವ್ಯವಹಾರ: ಜಿಲ್ಲಾ ಮಟ್ಟದ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಅಬಕಾರಿ ಅಧೀಕ್ಷಕರ ಪದನಾಮವನ್ನು ಹೆಚ್ಚುವರಿ ಅಬಕಾರಿ ಉಪ ಆಯುಕ್ತರು(ಎಡಿಸಿ) ಹುದ್ದೆ ಬದಲಾಯಿಸಲಾಗಿದೆ. ಕೆಲವರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ನಿಯಮಬಾಹಿರವಾಗಿ ಮರು ವಿನ್ಯಾಸ ಹೆಸರಿನಲ್ಲಿ ಕೆಳಹಂತದ ಹುದ್ದೆಗಳನ್ನು ಮೇಲ್ದರ್ಜೆಗೇರಿಸಿದರೆ, ಮೇಲ್ದರ್ಜೆಗೇರಿಸಿದ ಕೆಲ ಹುದ್ದೆಗಳನ್ನು ಕೆಳದರ್ಜೆಗೆ ಇಳಿಸಿದೆ ಎಂಬ ಆರೋಪಗಳಿವೆ.

ಯಾರಿಗೆಷ್ಟು ಪಾಲು?: ವಾಹನ ಚಾಲಕರು, ಅಬಕಾರಿ ರಕ್ಷಕ, ಅಬಕಾರಿ ನಿರೀಕ್ಷಕ, ಅಬಕಾರಿ ಅಧೀಕ್ಷಕ, ಡೆಪ್ಯೂಟಿ ಸೂಪರಿಂಟೆಂಡೆಂಟ್, ಸೂಪರಿಂಟೆಂಡೆಂಟ್, ಉಪ ಆಯುಕ್ತರಿಗೆ ಈ ಮಂಥ್ಲಿ ಮನಿ ಹಣ ಹಂಚಿಕೆಯಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳೇ ಮಾಹಿತಿ ನೀಡುತ್ತಾರೆ. ಇದರಲ್ಲಿ ಮೇಲಧಿಕಾರಿಗಳಿಗೆ ಹೆಚ್ಚು ಪಾಲು ಹೋಗುತ್ತದೆ. ಕ್ಲಬ್ ಮತ್ತು ಪಬ್ ನಡೆಸುವವರು ಪ್ರತಿ ತಿಂಗಳು ಸರಾಸರಿ 2 ಲಕ್ಷ ರೂ. ನೀಡಬೇಕಾಗುತ್ತದೆ. ಮದ್ಯದಂಗಡಿ ಸಂಬಂಧ ಏನಾದರೂ ನಿಯಮ ಉಲ್ಲಂಘನೆ ಕಂಡುಬಂದರೆ ಇನ್ನಷ್ಟು ಹಣಕ್ಕೆ ಬೇಡಿಕೆ ಇಡುತ್ತಾರೆ. ಒಂದು ವೇಳೆ ಹಣ ನೀಡಲು ನಿರಾಕರಿಸಿದರೆ ಕಿರುಕುಳ ಕೊಡಲು ಮುಂದಾಗುತ್ತಾರೆ.

ಕ್ಲಬ್ ನಡೆಸಲು ಖಾಕಿಗೆ 3 ಲಕ್ಷ ರೂ. ಲಂಚ!: ಬಾರ್ ಆಂಡ್ ರೆಸ್ಟೋರೆಂಟ್, ಕ್ಲಬ್​ಗಳನ್ನು ನಡೆಸಲು ಪೊಲೀಸರಿಗೂ ಪ್ರತ್ಯೇಕವಾಗಿ ಮಂಥ್ಲಿ ಮನಿ ಕೊಡಬೇಕು. ಬೆಂಗಳೂರಲ್ಲಿ ಕ್ಲಬ್ ನಡೆಸಲು ಠಾಣೆ, ಎಸಿಪಿ, ಡಿಸಿಪಿ ವರೆಗೆ ಪ್ರತಿ ತಿಂಗಳು ಮೂರು ಲಕ್ಷ ರೂ. ಕೊಡಬೇಕು ಎಂಬ ವಿಚಾರ ಕ್ಲಬ್ ಮಾಲೀಕ ಮತ್ತು ಏಜೆಂಟ್ ಎ.ಆರ್.ಅಶೋಕ್ ಕುಮಾರ್ ಅಡಿಗ ಮಾತನಾಡಿದ್ದ ಆಡಿಯೋದಿಂದ ಬೆಳಕಿಗೆ ಬಂದಿತ್ತು.

ಅಕ್ರಮ ವ್ಯವಹಾರವೇ 3,000 ಕೋಟಿ ರೂ.!: ಇನ್ನೊಂದೆಡೆ ರಾಜ್ಯದ 25 ಸಾವಿರ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಇದಕ್ಕೆ ಅಧಿಕಾರಿಗಳೇ ಕುಮ್ಮಕ್ಕು ಕೊಡುತ್ತಿದ್ದು, ಅಕ್ರಮ ಮದ್ಯ ಮಾರಾಟದಿಂದಲೇ ಪ್ರತಿವರ್ಷ ಅಂದಾಜು 3 ಸಾವಿರ ಕೋಟಿ ರೂ. ಮೊತ್ತದ ವಹಿವಾಟು ನಡೆಯುತ್ತಿದೆ. 2016-17ರಿಂದ 2020-21ರವರೆಗೆ ಅಕ್ರಮ ಮದ್ಯ ಮಾರಾಟ ಸಂಬಂಧ 1.13 ಲಕ್ಷ ಪ್ರಕರಣ ದಾಖಲಾಗಿದೆ. ಆದರೆ, ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಇಲಾಖೆ ವಿಫಲವಾಗಿದೆ.

3 ಕೋಟಿ ರೂ.ಗೆ ಡೀಲ್!: ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಜೋರಾಗಿದೆ. ಜಂಟಿ ಮಾಲೀಕತ್ವ, ವಿವಾದ ಹಾಗೂ ಮಾಲೀಕರ ನಿಧನ ಮತ್ತಿತರ ಕಾರಣಗಳಿಂದ ನವೀಕರಣವಾಗದೆ ಉಳಿಯುವ ಹಳೆಯ ಸಿಎಲ್2 ಹಾಗೂ ಸಿಎಲ್9 ಲೈಸೆನ್ಸ್​ಗಳಿಗೆ ಕಾಳದಂಧೆಯಲ್ಲಿ 2.5 ಕೋಟಿ ರೂ.ನಿಂದ 3 ಕೋಟಿ ರೂ.ವರೆಗೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಒಂದೊಂದು ದರ ನಿಗದಿ ಮಾಡಿದ್ದಾರೆ. ಅಬಕಾರಿ ಕಾನ್​ಸ್ಟೆಬಲ್​ನಿಂದ ಹಿಡಿದು ಅಬಕಾರಿ ಉಪ ಆಯುಕ್ತರವರೆಗೆ ಲಕ್ಷಾಂತರ ರೂ. ವರ್ಗಾವಣೆ ದಂಧೆ ನಡೆಯುತ್ತಿದೆ. ಡೆಪ್ಯೂಟಿ ಸೂಪರಿಂಟೆಂಡೆಂಟ್ ಒಬ್ಬರು ಇಲಾಖೆಯ ಎಲ್ಲ ವೃಂದದ ಸಿಬ್ಬಂದಿ ವರ್ಗಾವಣೆ ವಿಚಾರದ ಉಸ್ತುವಾರಿ ವಹಿಸಿಕೊಂಡಿದ್ದು, ಪ್ರತಿ ವರ್ಗಾವಣೆಗೆ ಲಕ್ಷಾಂತರ ರೂ. ಡೀಲ್ ಮಾಡಿಕೊಂಡು ಮೇಲಿನವರಿಗೆ ಮುಟ್ಟಿಸುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ.


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ