ಪ್ರಕಾಶ ಹುಕ್ಕೇರಿ ಅವರಿಗೆ 30 ವರ್ಷ ಜನ ಸರ್ಟಿಫಿಕೆಟ್ ಕೊಟ್ಟಿದ್ದಾರೆ. ಪ್ರಕಾಶ ಹುಕ್ಕೇರಿಗೆ ಬಿಜೆಪಿ, ಉಮೇಶ ಕತ್ತಿ, ಲಕ್ಷ್ಮಣ ಸವದಿ ಸರ್ಟಿಫಿಕೆಟ್ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿರುಗೇಟು ಕೊಟ್ಟಿದ್ದಾರೆ.
ಗೋಕಾಕ್‍ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸತೀಶ ಜಾರಕಿಹೊಳಿ ಜನ 30 ವರ್ಷ ಸರ್ಟಿಫಿಕೆಟ್ ಕೊಟ್ಟಿದ್ದಾರೆ. ಎಲ್ಲಾ ರಂಗದಲ್ಲಿಯೂ ಪ್ರಕಾಶ ಹುಕ್ಕೇರಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ವೇದಿಕೆಯಲ್ಲಿ ಪ್ರಕಾಶ ಹುಕ್ಕೇರಿ ಅವರಿಗೆ ವಯಸ್ಸಾಗಿದೆ ಎಂದು ಟೀಕಿಸಿದ್ದಾರೆ. ಆದರೆ ಕೆಲಸ ಮಾಡಲು ವಯಸ್ಸಿಗೆ ಯಾವುದೇ ನಿರ್ಬಂಧ ಇಲ್ಲ. ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ. ಈಗಲೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೂರು ಜಿಲ್ಲೆಗೆ ವಾಯುವ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾನ ಅತ್ಯಂತ ತುರುಸಿನಿಂದ ನಡೆಯುತ್ತಿದೆ. ಕಳೆದ ಎರಡ್ಮೂರು ಚುನಾವಣೆಗಳಲ್ಲಿ ಬಿಜೆಪಿಯವರು ಶಿಕ್ಷಕರ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದ್ದರು. ಆದರೆ ಈ ಬಾರಿ ಶಿಕ್ಷಕರ ಕ್ಷೇತ್ರದಿಂದ ಪ್ರಕಾಶ ಹುಕ್ಕೇರಿ ಖಂಡಿತವಾಗಲೂ ಗೆಲ್ಲುತ್ತಾರೆ. ಪದವೀಧರರ ಬಗ್ಗೆ ಪ್ರಯತ್ನ ಮಾಡುತ್ತಿದ್ದೇವೆ. ಅದಕ್ಕೆ ಮತದಾರರು ಬಹಳಷ್ಟಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್ ಪ್ರಥಮ ಬಾರಿಗೆ ಪ್ರಕಾಶ ಹುಕ್ಕೇರಿ ಗೆಲ್ಲುವಂತಹ ಎಲ್ಲಾ ಅವಕಾಶವಿದೆ. ಹೀಗಾಗಿ ಖಂಡಿತ ಗೆಲ್ಲುತ್ತೇವೆ.