ಕೊಲಂಬೋ: ಭಾರತದ ನೆರೆಯ ಪುಟ್ಟ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ನಿಯಂತ್ರಣವನ್ನು ತಪ್ಪಿದೆ. ಥಾಮಸ್ ಹೆಸರಿನ 69 ವರ್ಷದ ವ್ಯಕ್ತಿ ಇಂಡಿಯಾ ಟುಡೆಗೆ ಲಂಕಾ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದು, ಅಲ್ಲಿನ ಜನರ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ.
ಪೆಟ್ರೋಲ್ ಲಭ್ಯವಾಗುತ್ತಿಲ್ಲ. ಮೆಡಿಶಿನ್ ಪಡೆಯುವುದು ಕಷ್ಟಕರವಾಗಿದೆ. ಅಗತ್ಯ ಪದಾರ್ಥಗಳ ಬೆಲೆ ಗಗನಕ್ಕೇರಿವೆ. ಸದ್ಯದ ಕ್ಷಣದಲ್ಲಿ ನಮಗೆ ಯಾವುದೇ ಗ್ಯಾಸ್ ಸೌಲಭ್ಯ ಸಿಕ್ಕಿಲ್ಲ. ಮೆಡಿಶಿನ್ ಇಲ್ಲ. ನನ್ನ ವಯಸ್ಸು 69 ಆದರೆ, ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಘಟನೆಯನ್ನು ನಾನು ನೋಡಿದೆ ಎಂದು ಥಾಮಸ್ ಹೇಳಿದರು.
ನಮಗೆ ಇಲ್ಲಿನ ಪರಿಸ್ಥಿತಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹಣ ಮತ್ತು ಸಂಬಳವಿಲ್ಲ. ನಮ್ಮ ಬಳಿ ಹಣವಿದ್ದರೆ, ಸರಕುಗಳಿಲ್ಲ. ನಾವು ಕೊಲಂಬೋದ ಕೆಲವು ಅಂಗಡಿಗಳಿಗೆ ಹೋದಾಗ ಅವರು ಬೇಳೆ ಇಲ್ಲ, ಅಕ್ಕಿ ಇಲ್ಲ, ಬ್ರೆಡ್ ಇಲ್ಲ ಎಂದು ಹೇಳುತ್ತಾರೆ ಅಥವಾ ಒಂದು ಪೌಂಡ್ ಬ್ರೆಡ್‌ನ ಬೆಲೆ ಶ್ರೀಲಂಕಾದ 100 ರೂಪಾಯಿಗಳು ಎನ್ನುತ್ತಿದ್ದಾರೆ. ಒಂದು ಕಪ್ ಚಹಾದ ಬೆಲೆ 100 ರೂಪಾಯಿ ಅಗಿದೆ. ಪ್ರಮುಖ ವಸ್ತುಗಳ ಬೆಲೆಗಳನ್ನು ಕೇಳತೀರದ್ದಾಗಿದೆ. ಇದಲ್ಲದೆ, ಶ್ರೀಲಂಕಾದಲ್ಲಿ ದೀರ್ಘಾವಧಿಯ ವಿದ್ಯುತ್ ಕಡಿತವು ದೇಶದ ಸಂವಹನ ಜಾಲಗಳ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.