Breaking News

ಪ್ರಕೃತಿಯೇ ಸಂಭ್ರಮಿಸುವ ಹಬ್ಬ ಯುಗಾದಿ

Spread the love

Ugadi Special 2022 : ಹಿಂದೂ ಸಂಪ್ರದಾಯದಲ್ಲಿ ಈ ಯುಗಾದಿಗೆ ಅದರದೇ ಆದ ಮಹತ್ವದ ಸ್ಥಾನಮಾನವಿದೆ. ಭಾರತದ ಅನೇಕ ರಾಜ್ಯಗಳಲ್ಲಿ ಅದ್ದೂರಿಯಾಗಿ ಆಚರಿಸುತ್ತಿರುವ ಈ ಹಬ್ಬ ಯುಗಾದಿ, ಹೊಸ ವರ್ಷ, ಗುಡಿಪಾಡ್ವಾ ಹೀಗೆ ಅನೇಕ ನಾಮಗಳನ್ನು ಹೊತ್ತು ನಿಂತಿದೆ.ಯುಗಾದಿ ಸಮೀಪಿಸುತ್ತಿದೆ ಎಂದರೆ ಸಾಕು, ಪ್ರಕೃತಿಯಲ್ಲಿ ಏನೋ ಒಂದು ಹೊಸತನ, ಹೊಸ ಚೈತನ್ಯ,ಹೊಸ ಹುರುಪು, ಮರಗಿಡಗಳು ಹಚ್ಚ ಹಸಿರಿನಿಂದ ಕಂಗೊಳಿಸಿದಾಗ ಮನಸ್ಸಿಗೆ ಸಂತಸ ನೀಡುತ್ತದೆ, ಅಂತಹ ಬದಲಾವಣೆಯ ಪ್ರಕೃತಿಯನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳೇ ಸಾಲದು.

ಅನೇಕ ಆಚರಣೆಗಳಲ್ಲಿ ಯುಗಾದಿ ಬಹಳ ಶ್ರೇಷ್ಠವಾದದ್ದು ಈ ಹಬ್ಬವನ್ನು ಏಪ್ರಿಲ್ 2ರಂದು ಚೈತ್ರಮಾಸದ ಮೊದಲ ದಿನವನ್ನಾಗಿ “ಯುಗಾದಿ” ಎಂಬ ಹೆಸರಿನಿಂದ ದೇಶದಾದ್ಯಂತ ಆಚರಿಸುತ್ತೇವೆ. ಹಾಗೆಯೇ ಪ್ರಕೃತಿಯು ಕೂಡ ತನ್ನ ಹೊಸ ರೂಪದಲ್ಲಿ ಆಚರಿಸುತ್ತದೆ, ಹೊಸ ಚಿಗುರಿನಿಂದ ಪ್ರಕೃತಿಯು ಕಣ್ಣುಗಳಿಗೆ ತಂಪನ್ನು ನೀಡುತ್ತದೆ. ಮಾವು, ಹಲಸು ಹೀಗೆ ಹಲವು ಫಲಗಳ ಕಾಲವೇ ಈ ವಸಂತ ಕಾಲ. ತಂಪನೆಯ ಗಾಳಿ, ಕೋಗಿಲೆಗಳ ರಾಗ ಕರ್ಣ ಕುಂಡಲಗಳಿಗೆ ಇಂಪು ನೀಡುತ್ತದೆ. ಮರಗಳ ಎಲೆಗಳು ಉದುರಿ ಹೊಸ ಚಿಗುರಿನಿಂದ ಕಂಗೊಳಿಸುತ್ತಿರುತ್ತದೆ. “ಯುಗಾದಿ” ಎಂದರೆ ಸಂಸ್ಕೃತದ “ಯುಗ “ಮತ್ತು “ಆದಿ” ಶಬ್ದದಿಂದ ಹುಟ್ಟಿಕೊಂಡಿದೆ, “ಯುಗ” ಎಂದರೆ ಹೊಸವರುಷ “ಆದಿ” ಎಂದರೆ ಆರಂಭ, ಇವೆರಡೂ ಜೊತೆಯಾದರೆ “ಹೊಸ ವರುಷ ಆರಂಭ” ಎಂಬ ಅರ್ಥವನ್ನು ನೀಡುತ್ತದೆ.

ಹಿಂದೂ ಸಂಪ್ರದಾಯದಲ್ಲಿ ಈ ಯುಗಾದಿಗೆ ಅದರದೇ ಆದ ಮಹತ್ವದ ಸ್ಥಾನಮಾನವಿದೆ. ಭಾರತದ ಅನೇಕ ರಾಜ್ಯಗಳಲ್ಲಿ ಅದ್ದೂರಿಯಾಗಿ ಆಚರಿಸುತ್ತಿರುವ ಈ ಹಬ್ಬ ಯುಗಾದಿ, ಹೊಸ ವರ್ಷ, ಗುಡಿಪಾಡ್ವಾ ಹೀಗೆ ಅನೇಕ ನಾಮಗಳನ್ನು ಹೊತ್ತು ನಿಂತಿದೆ. ಯುಗಾದಿ ಆಚರಣೆಯ ಸಮಯದಲ್ಲಿ ಎಲ್ಲರ ಕಣ್ಣಲ್ಲೂ ಸಂಭ್ರಮ ತುಂಬಿ ತುಳುಕುತ್ತಿರುತ್ತದೆ. ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸಿರುತ್ತಾರೆ. ಮುಂಜಾನೆ ಬೇಗನೆ ಎದ್ದು ಸ್ನಾನ ಮುಗಿಸಿ ರಂಗೋಲಿ ಇಡುತ್ತಾರೆ, ಮನೆಯ ಮುಂದೆ ಚಂದದ ರಂಗೋಲಿ ಯುಗಾದಿಯನ್ನು ಸ್ವಾಗತಿಸಲು ಸಜ್ಜದಂದೆ ಭಾಸವಾಗುತ್ತದೆ, ಹೊಸ ವರುಷಕ್ಕೆ ಹೊಸ ಉಡುಗೆಯನ್ನು ತೊಟ್ಟು ಮನೆಯಲ್ಲಿ ಅಥವಾ ದೇವಸ್ಥಾನಗಳಲ್ಲಿ ಹಬ್ಬ ಆಚರಿಸುತ್ತಾರೆ. ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ, ಮನೆಯಲ್ಲಿ ತರತರಹದ ಅಡುಗೆ ಮತ್ತು ಸಿಹಿ ಭಕ್ಷಿಯಾ ತಯಾರಿಸಿ ಮನೆಯವರ ಜೊತೆ ಸೇರಿ ಭೋಜನ ಮಾಡುತ್ತಾರೆ. ಈ ಹಬ್ಬದ ವಿಶೇಷ ಎಂದರೆ, ಸಾಂಪ್ರದಾಯವಾಗಿ “ಬೇವು-ಬೆಲ್ಲ” ವನ್ನು ಪರಸ್ಪರ ಹಂಚಿಕೊಂಡು ಹಬ್ಬಕ್ಕೆ ಶುಭ ಕೋರುತ್ತಾರೆ.

” ಬೇವಿನ ಸ್ವಾದ ಕಹಿ “ಬೆಲ್ಲ” ದ ಸ್ವಾದ ಸಿಹಿ ಇದರ ಅರ್ಥ ಜೀವನದಲ್ಲಿ ಸುಖ ಮತ್ತು ದುಃಖ ಸರ್ವೇಸಾಮಾನ್ಯ ಎರಡನ್ನೂ ಬೇವು ಬೆಲ್ಲದಂತೆ ಸಮವಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು ಸಾರುವುದು ಇದರ ಉದ್ದೇಶವಾದರೆ, ವೈಜ್ಞಾನಿಕವಾಗಿ ಬೇವು ರೋಗನಿರೋಧಕ ಶಕ್ತಿ ಹೊಂದಿದ ಒಂದು ಸಸ್ಯ, ಹಾಗೂ ಇದು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ. ಬೆಲ್ಲ ಖನಿಜಾಂಶವನ್ನು ಹೊಂದಿದ್ದು ಪೋಷಕಾಂಶವನ್ನು ದೇಹಕ್ಕೆ ಒದಗಿಸುತ್ತದೆ, ಹೀಗೆ ಅನೇಕ ಸಮಸ್ಯೆಗೆ ಪರಿಹಾರವನ್ನು ಒದಗಿಸುತ್ತದೆ, ಎಂದು ವಿಶ್ಲೇಷಿಸಲಾಗಿದೆ. ಇನ್ನೂ ಹಿಂದೂ ಸಂಪ್ರದಾಯದ ವಿಚಾರಕ್ಕೆ ಬಂದರೆ ಯಾವುದೇ ಶುಭ ಕಾರ್ಯದ ಸಂದರ್ಭದಲ್ಲಿ “ಪಂಚಾಂಗ ” ನೋಡಿ ದಿನ ನಿಗದಿ ಮಾಡುತ್ತಾರೆ, ಅಂತಹ “ಪಂಚಾಂಗ” ಒಂದು ವರ್ಷದಿಂದ ಇನ್ನೊಂದು ವರ್ಷಕ್ಕೆ ಬದಲಾಗುತ್ತದೆ, ಆ ಬದಲಾವಣೆಯನ್ನು ಮಾಡುವುದು ಇದೇ ಯುಗಾದಿಯ ನಂತರ. ಈ ದಿನವನ್ನು ಅತ್ಯಂತ ಶುಭಕರ ದಿನವೆಂದು ಹೇಳಲಾಗುತ್ತದೆ. ಹೀಗೆ ಹತ್ತು ಹಲವು ಸಾಂಪ್ರದಾಯಿಕ, ವೈಜ್ಞಾನಿಕ ನೆಲೆಯಿಂದ ಹೊಸ ವರ್ಷವನ್ನಾಗಿ ಆಚರಿಸುತ್ತಿರುವ ಯುಗಾದಿಯು ಎಲ್ಲರ ಬಾಳಿಗೆ ಹರುಷವನ್ನು ತರಲಿ.

ಕವಿತಾ
ಆಳ್ವಾಸ್ ಕಾಲೇಜು ಮೂಡುಬಿದಿರೆ


Spread the love

About Laxminews 24x7

Check Also

ಪ್ರಿಯಕರನ ಜೊತೆ ಸೇರಿ ತಾಯಿಯಿಂದಲೇ ಮಗಳ ಕೊಲೆ: ಕಠಿಣ ಶಿಕ್ಷೆಗೆ ಸಂಬಂಧಿಕರ ಆಗ್ರಹ

Spread the love ಹಾವೇರಿ: ಪ್ರಪಂಚದಲ್ಲಿ ಕೆಟ್ಟ ತಂದೆ ಇರಬಹುದು. ಆದ್ರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಆದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ