ಹೀಗಾಗಿ ಈ ಗ್ರಾಮದಲ್ಲಿ ಮದುವೆಯಾಗ್ಬೇಕಾಗಿರೋ ಯುವಕರದ್ದೊಂದು ದೊಡ್ಡ ಬಟಾಲಿಯನ್ನೇ ಇದೆ. 2007, 2009 ಹಾಗೂ 2019ರಲ್ಲಿ ಮಲಪ್ರಭಾ ನದಿಯ (Malaprabha River) ಪ್ರವಾಹಕ್ಕೆ ತುತ್ತಾಗಿ ಮನೆ ಮಠ ಕಳೆದುಕೊಂಡಿರುವ ಗದಗ (Gadag) ಜಿಲ್ಲೆಯ ರೋಣ (Rona) ತಾಲ್ಲೂಕಿನ ಗಾಡಗೋಳಿ ನವಗ್ರಾಮದ ನೆರೆ ಸಂತ್ರಸ್ತರ ಗೋಳಾಟವಿದು. ಸರ್ಕಾರ ಮನೆ ಏನೋ ನಿರ್ಮಾಣ ಮಾಡಿಕೊಟ್ಟು ಕೈ ತೊಳೆದುಕೊಂಡಿತು. ಆದರೆ, ಮನೆಗಳ ಹಕ್ಕುಪತ್ರ ನೀಡದೇ ಸತಾಯಿಸುತ್ತಿದೆ. ಹಕ್ಕುಪತ್ರ ಸಿಗದೇ ನೆರೆ ಸಂತ್ರಸ್ತರು ಇಂದಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೋರಾಟ ನಡೆಸಿದರೂ ಸಿಗಲಿಲ್ಲ ಗೆಲುವು
ಮನೆ ಬೀಳುವ ಹಂತಕ್ಕೆ ಬಂದಿದ್ದರೂ, ಹಕ್ಕುಪತ್ರ ವಿತರಿಸದಕ್ಕಾಗಿ ಸ್ವಂತದ್ದಲ್ಲವೆಂಬ ಕಾರಣಕ್ಕೆ ಮನೆ ದುರಸ್ಥಿಗೂ ಮುಂದಾಗದ ಹಾಗೆ ಆಗಿದೆ. ಮನೆಗಳ ಹಕ್ಕುಪತ್ರಕ್ಕಾಗಿ ಗಾಡಗೋಳಿ ಗ್ರಾಮಸ್ಥರು ಜಿಲ್ಲಾಡಳಿತದ ವಿರುದ್ಧ ಅನೇಕ ಬಾರಿ ಹೋರಾಟಗಳನ್ನು ಮಾಡಿದ್ದರೂ, ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿಭಟನೆ ನಡೆಸಿದಾಗೊಮ್ಮೆ ಮೂಗಿಗೆ ತುಪ್ಪವರೆಸುತ್ತಿರುವ ಅಧಿಕಾರಿಗಳಿಗೆ ಸಂತ್ರಸ್ತರ ಗೋಳು ಕೇಳದಾಗಿದೆ ಎಂದು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಅದರಂತೆ, ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿದ್ದ ಹಲವು ಗ್ರಾಮಗಳ ನೆರೆ ಸಂತ್ರಸ್ತರಿಗೆ ಹಕ್ಕು ಪತ್ರಗಳನ್ನೂ ವಿತರಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ಗಾಡಗೋಳಿ ಗ್ರಾಮದ ಜನರಿಗೆ ಮಾತ್ರ ಮನೆ ಹಂಚಿಕೆ ಮಾಡಿರುವ ಸರ್ಕಾರ ಹಕ್ಕುಪತ್ರ ವಿತರಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಇದಕ್ಕೆ ರಾಜಕೀಯ ತಿಕ್ಕಾಟವೂ ಕಾರಣ ಎಂದು ಹೇಳಲಾಗುತ್ತಿದೆ.