ಉಡುಪಿ, ಡಿ.29: ಜಿಲ್ಲೆಯ ಬ್ರಹ್ಮಾವರ ತಾಲೂಕು ಕೋಟತಟ್ಟು ಗ್ರಾಪಂ ವ್ಯಾಪ್ತಿಯ ಕೊರಗರ ಕೇರಿಯ ಕುಟುಂಬವೊಂದರಲ್ಲಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸರ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ವಿವಾದಗಳು ನಡೆದು, ದೌರ್ಜನ್ಯವೆಸಗಿದ ಪೊಲೀಸ್ ಠಾಣೆಯ ಪಿಎಸ್‌ಐ ಅಮಾನತು ಸೇರಿದಂತೆ 5ಕ್ಕೂ ಹೆಚ್ಚು ಪೊಲೀಸರ ವರ್ಗಾವಣೆ ಮಾಡಿದ್ದು, ಮೇಲಾಧಿಕಾರಿಗಳಿಂದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದು ಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನೊಂದ ಕುಟುಂಬದ ವಿವಾಹ ಸಮಾರಂಭದಲ್ಲಿ ಭಾಗಿಯಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಈ ಕೊರಗ ಜನಾಂಗದ ಕುಟುಂಬಗಳನ್ನು ನಾನು ಹತ್ತಿರದಿಂದ ಕಂಡಿದ್ದು, ಅವರೆಲ್ಲರ ಆತ್ಮೀಯತೆಯನ್ನು ಗಳಿಸಿದ್ದೇನೆ. ನನ್ನೂರ ಭಾಗದಲ್ಲಿ ಇರುವಂತಹ ಏಕೈಕ ಕೊರಗರ ಕೇರಿ ಇದಾಗಿದ್ದು, ಈ ಮುಗ್ಧ ಜನರ ಮೇಲೆ ಹಲ್ಲೆ ನಡೆದದ್ದು ನೋವಿನ ಸಂಗತಿ. ವಿವಾಹದ ಕಾರ್ಯಕ್ರಮವೆಲ್ಲ ಮುಗಿದ ನಂತರ ತಡರಾತ್ರಿ ಆದರೂ ಸಂತ್ರಸ್ಥ ಕುಟುಂಬದ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದೇನೆ ಎಂದು ಸಚಿವ ಕೋಟ ತಿಳಿಸಿದರು.
ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಸಚಿವರು ಬರುತ್ತಲೇ ನೆರೆದ ನೂರಾರು ಆದಿವಾಸಿ ಕೊರಗ ಜನಾಂಗದವರು ಡೊಳ್ಳು ಮತ್ತು ಚಂಡೆಗಳ ಮೂಲಕ ಸಚಿವರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡು ಸ್ವಾಗತ ನೀಡಿದರು.
ಸಚಿವರ ಜೊತೆ ಕುಮಟಾದ ಹಿರಿಯ ಬಿಜೆಪಿ ಪ್ರಮುಖರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.