ನವದೆಹಲಿ – ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಸಹೋದರ, ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಪ್ರಚಾರ ಮಾಡಲು ಬಿಜೆಪಿ ರಾಷ್ಟ್ರೀಯ ನಾಯಕರ ಅನುಮತಿ ಪಡೆಯಲು ಮಾಜಿ ಸಚಿವ ರಮೇಶ ಜಾರಕಿಹೊಳಿ ದೆಹಲಿಗೆ ತೆರಳಿದ್ದಾರೆ.
ಭಾನುವಾರ ಸಂಜೆ ವಿಧಾನಪರಿಷತ್ ಹಾಲಿ ಸದಸ್ಯ ವಿವೇಕರಾವ್ ಪಾಟೀಲ ಅವರೊಂದಿಗೆ ದೆಹಲಿ ತಲುಪಿರುವ ರಮೇಶ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಅವರನ್ನು ಭೇಟಿಯಾಗಿದ್ದಾರೆ.
ಈ ವೇಳೆ ನಳೀನ್ ಕುಮಾರ ಕಟೀಲ್ ಅವರಿಗೆ ವಿವೇಕರಾವ್ ಪಾಟೀಲ ಹೂ ಗುಚ್ಛ ಕೊಡುವ ಫೋಟೋ ಹೊರಬಿದ್ದಿದ್ದು, ವಿವೇಕರಾವ್ ಪಾಟೀಲ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೋ ಅಥವಾ ಈ ಸಂಬಂಧ ಮಾತುಕತೆ ನಡೆಯಿತೋ ಎನ್ನುವ ಮಾಹಿತಿ ಇನ್ನಷ್ಟೆ ಬರಬೇಕಿದೆ.
ವಿವೇಕರಾವ್ ಪಾಟೀಲ ಶೀಘ್ರ ಬಿಜೆಪಿ ಸೇರಲಿದ್ದಾರೆ ಎಂದು ರಮೇಶ ಜಾರಕಿಹೊಳಿ ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ವಿವೇಕರಾವ್ ಪಾಟೀಲ ಕೂಡ ತಾಲು ಬಿಜೆಪಿ ಸೇರಲು ನಿರ್ಧರಿಸಿರುವುದನ್ನು ಖಚಿತಪಡಿಸಿದ್ದರು.
ರಮೇಶ ಜಾರಕಿಹೊಳಿ ಸೋಮವಾರ ಬಿಜೆಪಿ ವರಿಷ್ಟರನ್ನು ಭೇಟಿಯಾಗಿ ಲಖನ್ ಜಾರಕಿಹೊಳಿ ಅವರ ಪರವಾಗಿ ಅಧಿಕೃತವಾಗಿ ಪ್ರಚಾರ ಮಾಡಲು ಅನುಮತಿ ಕೇಳಲಿದ್ದಾರೆ.