ಬೆಳಗಾವಿ: ಭಾರಿ ಮಳೆಗೆ ಮನೆ ಕುಸಿದು ಒಂದೇ ಮನೆಯ ಐವರು ಮೃತಪಟ್ಟ ವಿಷಾದಕರ ಘಟನೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಸಂಭವಿಸಿದೆ. 7 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದು ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಗಂಗವ್ವ ಭೀಮಪ್ಪ(80), ಸತ್ಯವ್ವ ಅರ್ಜುನ್(45), ಕಾಶವ್ವ(8), ಪೂಜಾ ಅರ್ಜುನ್(8), ಸವಿತಾ ಭೀಮಪ್ಪ(28) ಮೃತರು. ಭೀಮಪ್ಪ ಖನಗಾಂವಿ ಎಂಬುವವರಿಗೆ ಸೇರಿದ ಮನೆ ಕುಸಿದಿದೆ. ಸ್ಥಳದಲ್ಲೇ ಐವರು, ಆಸ್ಪತ್ರೆಗೆ ಸಾಗಿಸುವಾಗ ಇಬ್ಬರು ಮೃತಪಟ್ಟಿದ್ದಾರೆ. ದುರ್ಘಟನೆ ನಡೆದ ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರ ಭೇಟಿ ನೀಡಿ ಸ್ಥಳೀಯರ ಜತೆಗೂಡಿ ಬಿದ್ದ ಮನೆಯ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಸಚಿವ ಗೋವಿಂದ ಕಾರಜೋಳ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗೆ ಕರೆ ಮಾಡಿ ಮಾಹಿತಿ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಗ್ರಾಮಕ್ಕೆ ಭೇಟಿ ನೀಡುವಂತೆ ಸಚಿವರಿಗೆ ಸೂಚನೆ ನೀಡಿದ್ದಾರೆ.
ಅರ್ಜುನ್ ಖನಗಾವಿ ಅವರು 9 ವರ್ಷಗಳ ಹಿಂದೆ ಮಣ್ಣಿನ ಮನೆ ಕಟ್ಟಿದ್ದರು. ಅದು ಮಣ್ನಿನ ಮನೆಯಾಗಿದ್ದ ಕಾರಣ ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಹೊಸ ಮನೆ ನಿರ್ಮಾಣ ಹಿನ್ನೆಲೆ ಪಕ್ಕದ ಮನೆಗೆ ಶಿಫ್ಟ್ ಆಗಿದ್ದರು. ಮಳೆ ನಿಂತ ನಂತರ ಮಣ್ಣಿನ ಮನೆ ನೋಡಲು ಕುಟುಂಬ ಸಮೇತ ಆಗಮಿಸಿದ್ದರು. ಈ ವೇಳೆ ಏಕಾಏಕಿ ಮಣ್ಣಿನ ಮನೆ ಕುಸಿದು ಬಿದ್ದು ದುರ್ಘಟನೆ ಸಂಭವಿಸಿದೆ. ಗೆಳತಿ ಜತೆ ಹೋಗಿದ್ದ ಪಕ್ಕದ ಮನೆಯ ಬಾಲಕಿ ಕಾಶವ್ವ ಸಹ ಸಾವನ್ನಪ್ಪಿದ್ದಾರೆ.