Breaking News
Home / ರಾಜಕೀಯ / ಸಿಎಂ ಹುದ್ದೆಗೆ ಯಡಿಯೂರಪ್ಪ ರಾಜೀನಾಮೆ: ಹಾಲು ಕುಡಿದವರು ಯಾರ್ಯಾರು?

ಸಿಎಂ ಹುದ್ದೆಗೆ ಯಡಿಯೂರಪ್ಪ ರಾಜೀನಾಮೆ: ಹಾಲು ಕುಡಿದವರು ಯಾರ್ಯಾರು?

Spread the love

ಹರಸಾಹಸ ಪಟ್ಟು ಅಧಿಕಾರಕ್ಕೇರಿದ ಯಡಿಯೂರಪ್ಪನವರಿಗೆ ಅಧಿಕಾರಕ್ಕೆ ಬಂದ ದಿನದಿಂದ, ರಾಜೀನಾಮೆ ನೀಡಿದ ಜುಲೈ 26ರ ವರೆಗಿನ ಎರಡು ವರ್ಷದ ಅವಧಿ ತಂತಿಯ ಮೇಲಿನ ನಡಿಗೆಯೇ. ಅವರೇ ಹೇಳಿದಂತೆ ಪ್ರತೀದಿನ ಅಗ್ನಿಪರೀಕ್ಷೆ.

ಯಡಿಯೂರಪ್ಪನವರನ್ನು ಆ ಸ್ಥಾನದಿಂದ ಕೆಳಗಿಳಿಸಬೇಕೆಂದು ದೆಹಲಿಯಲ್ಲಿ ನಡೆಯುತ್ತಿದ್ದ ಲಾಬಿ ಕೊನೆಗೂ ಕೈಗೂಡಿದೆ. ಯಡಿಯೂರಪ್ಪನವರ ವಿರೋಧಿ ಪಾಳಯದಲ್ಲಿ ಇರುವವರಿಗೆ ಇಂದು ಹೊಟ್ಟೆ ತುಂಬಾ ಹಾಲು ಕುಡಿದಷ್ಟು ಸಂಭ್ರಮವಾಗಿರಬಹುದು.

 

ಹಂಗಾಮೀ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ವಿದಾಯದ ಭಾಷಣದಲ್ಲಿ ಹೇಳಿದಂತೆ, ಆರಂಭ ದಿನಗಳಲ್ಲಿ ಸುಮಾರು ಎರಡು ತಿಂಗಳು ಸಂಪುಟ ರಚನೆ ಮಾಡಲು ಬಿಜೆಪಿ ವರಿಷ್ಠರು ಅನುಮತಿಯನ್ನು ನೀಡಿರಲಿಲ್ಲ.

ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಸಂಬಂಧ ತೆರೆಮೆರೆಯಲ್ಲಿ ಒಂದು ವರ್ಷದ ಹಿಂದೆಯೇ ಅವರ ವಿರೋಧಿಗಳು ಪ್ರಯತ್ನವನ್ನು ಆರಂಭಿಸಿದ್ದರು. ಆದರೆ, ಪ್ರತೀ ಬಾರಿ ಬಿಎಸ್ವೈ ಬಲಾಢ್ಯವಾಗಿ ಹೊರಹೊಮ್ಮುತ್ತಿದ್ದರು.

ಪ್ರಧಾನಿ ಭೇಟಿಗಾಗಿ ದೆಹಲಿಗೆ ಹೋದರೂ, ಅವರಿಗೆ ಅವಕಾಶ ಸಿಗಲಿಲ್ಲ

ಯಡಿಯೂರಪ್ಪನವರು ಸಿಎಂ ಆದ ನಂತರ ಕೇಂದ್ರ ಸರಕಾರ ಇವರ ಬೆಂಬಲಕ್ಕೆ ನಿಂತ ಉದಾಹರಣೆಗಳಿಗಿಂತ ಅವರನ್ನು ಕಡೆಗಣಿಸಿದ್ದೇ ಹೆಚ್ಚು. ಉತ್ತರ ಕರ್ನಾಟಕದ ಪ್ರವಾಹದ ವೇಳೆ, ಹಲವು ಬಾರಿ ದೆಹಲಿ ಭೇಟಿಗೆ ಅನುಮತಿ ಕೇಳಿದ್ದರೂ, ಬಿಜೆಪಿ ವರಿಷ್ಠರಿಂದ ಸಂದೇಶವೇ ಬಂದಿರಲಿಲ್ಲ. ಪ್ರಧಾನಿ ಭೇಟಿಗಾಗಿ ದೆಹಲಿಗೆ ಹೋದರೂ, ಅವರಿಗೆ ಭೇಟಿಗೆ ಅವಕಾಶ ನೀಡದೇ ಮೋದಿ ವಾಪಸ್ ಕಳುಹಿಸಿದ ವಿದ್ಯಮಾನವೂ ನಡೆದಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.

ಬಿಜೆಪಿಯಲ್ಲಿನ ಮಾರ್ಗದರ್ಶಕ ಮಂಡಳಿ ಎನ್ನುವ ವೃದ್ದಾಶ್ರಮ

 

75ವರ್ಷದ ಮೇಲೆ ಬಿಜೆಪಿಯಲ್ಲಿನ ಮಾರ್ಗದರ್ಶಕ ಮಂಡಳಿ ಎನ್ನುವ ವೃದ್ದಾಶ್ರಮಕ್ಕೆ ಯಡಿಯೂರಪ್ಪನವರನ್ನು ಅಂದೇ ಕಳುಹಿಸಬೇಕಾಗಿತ್ತು. ಆದರೆ, ಯಡಿಯೂರಪ್ಪನವರಿಗೆ ಇರುವ ಭಾರೀ ಜನಬೆಂಬಲ, ಅವರ ಪರವಾಗಿರುವ ಬಿಜೆಪಿ ಪಾಲಿಗೆ ನಿರ್ಣಾಯಕವಾಗಿರುವ ಲಿಂಗಾಯತ ಸಮುದಾಯದ ಶ್ರೀರಕ್ಷೆ, ಯಡಿಯೂರಪ್ಪನವರನ್ನು ಎರಡು ವರ್ಷ ಮುಖ್ಯಮಂತ್ರಿ ಹುದ್ದೆಯಲ್ಲಿ ನಿಲ್ಲುವಂತೆ ಮಾಡಿತು ಎನ್ನುವುದು ನಿರ್ವಿವಾದ.

ಮನಸೋ ಇಚ್ಚೆ ಟೀಕಿಸುವ ಬಸನಗೌಡ ಪಾಟೀಲ್ ಯತ್ನಾಳ್

 

ಇನ್ನು, ಕೇಂದ್ರದ ನಾಯಕರನ್ನು ಹೊಗಳುತ್ತಾ, ಯಡಿಯೂರಪ್ಪ ಮತ್ತವರ ಪುತ್ರರನ್ನು ಮನಸೋ ಇಚ್ಚೆ ಟೀಕಿಸುವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ವರಿಷ್ಠರೇ ಪರೋಕ್ಷ ಬೆಂಬಲ ನೀಡುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಕಾಡುವುದಕ್ಕೆ ಹಲವು ಕಾರಣಗಳಿವೆ. ಎಷ್ಟು ಕಟುವಾಗಿ ಟೀಕಿಸುತ್ತಿದ್ದರೂ, ಸುಮ್ಮನೆ ಎಚ್ಚರಿಕೆ ಕೊಟ್ಟು ಬಿಜೆಪಿ ಹೈಕಮಾಂಡ್ ಸುಮ್ಮನಾಗುತ್ತಿತ್ತು.

ಸಿಎಂ ಹುದ್ದೆಗೆ ಯಡಿಯೂರಪ್ಪ ರಾಜೀನಾಮೆ: ಹಾಲು ಕುಡಿದವರೆಷ್ಟೋ ಜನ

ಒಟ್ಟಿನಲ್ಲಿ, ಅಂತೂ ಇಂತೂ ಬಿಎಸ್ವೈ ವಿರೋಧಿ ಪಾಳಯ ಬಯಸಿದ ದಿನ ಬಂದೇ ಬಿಟ್ಟಿದೆ. ಯಡಿಯೂರಪ್ಪ ಅಳುತ್ತಾ ರಾಜೀನಾಮೆ ಸಲ್ಲಿಸಿದ್ದಾರೆ. ಯತ್ನಾಳ್, ಯೋಗೇಶ್ವರ್, ಬಿಜೆಪಿ ವರಿಷ್ಠರು ಮಾತ್ರ ಇಂದು ಹಾಲು ಕುಡಿದಿರಲಿಕ್ಕಿಲ್ಲ, ಆ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಅಲ್ಲಿಗೆ, ಬಹುತೇಕ ರಾಜ್ಯ ರಾಜಕಾರಣದಲ್ಲಿನ ಪ್ರಶ್ನಾತೀತ ನಾಯಕರಾಗಿದ್ದಂತಹ ಯಡಿಯೂರಪ್ಪನವರ ಯುಗ ಮುಗಿದಂತೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ