ಹಾಸನ: ಅದೊಂದು ಬಡಕುಟುಂಬ. ಆದರೆ ಅವರ ಸಂಸಾರದಲ್ಲಿ ಸುಖ, ಸಂತೋಷಕ್ಕೇನು ಕಡಿಮೆಯಿರಲಿಲ್ಲ. ತಂದೆ – ತಾಯಿ ಕೂಲಿ ಮಾಡಿ ತಮ್ಮ ನಾಲ್ಕು ಹೆಣ್ಣು ಮಕ್ಕಳಿಗೆ ಯಾವುದಕ್ಕೂ ಕೊರತೆಯಾಗದಂತೆ ಸಾಕುತ್ತಿದ್ದರು. ಆದರೆ ಆ ಸುಂದರ ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ಒಂದೇ ತಿಂಗಳಲ್ಲಿ ಮದುವೆಯಾಗಿದ್ದ ಇಬ್ಬರು ಹೆಣ್ಣುಮಕ್ಕಳು ಸಾವನ್ನಪ್ಪಿದ್ದು, ಇಡೀ ಕುಟುಂಬದ ಕಣ್ಣೀರಿನಲ್ಲಿ ಮುಳುಗಿದೆ. ಹಾಗಾದ್ರೆ ಆ ಕುಟುಂಬದಲ್ಲಿ ಅಂತಹದ್ದು ಏನಾಯಿತು. ಇಬ್ಬರು ಹೆಣ್ಣುಮಕ್ಕಳು ಸಾವನ್ನಪ್ಪಿದ್ದು ಹೇಗೆ ಈ ವರದಿ ನೋಡಿ.
ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಬೆಳಗೊಂಡ್ಲು ಗ್ರಾಮದ ಕಾಫಿ ತೋಟದ ಕಾರ್ವಿುಕರಾದ ಉದಯ್ ಮತ್ತು ಅನಿತಾ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳು. ಈ ಪೈಕಿ ಸೌಂದರ್ಯ ಮೊದಲ ಮಗಳು. ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದು, ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂದು ಮದುವೆಯಾಗಲು ನಿರಾಕರಿಸಿದ್ದಳು. ಬಳಿಕ ಈಕೆಯ ತಂಗಿ ಐಶ್ವರ್ಯಾಗೆ ಕಳೆದ ವರ್ಷ ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಕಾವೇರಿಪುರದ ನಿವಾಸಿ ನಾಗರಾಜು ಜೊತೆ ಮದುವೆ ಮಾಡಲಾಗಿತ್ತು. ನಾಗರಾಜು ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ. ದಂಪತಿ ಇಬ್ಬರೂ ತುಮಕೂರು ನಗರದ ಸರಸ್ವತಿಪುರಂನಲ್ಲಿ ವಾಸಿಸುತ್ತಿದ್ದರು. ಇನ್ನಿಬ್ಬರು ಮಕ್ಕಳು ಪಿಯುಸಿ, ಎಸ್ಎಸ್ಎಲ್ಸಿ ಓದುತ್ತಿದ್ದಾರೆ. ನನಗೆ ಮದುವೆ ಬೇಡ ಎಂದಿದ್ದ ಹಿರಿಯ ಮಗಳು ಸೌಂದರ್ಯ ಫೇಸ್ಬುಕ್ನಲ್ಲಿ ಪರಿಚಯವಾದ ಹೊಸನಗರ ತಾಲೂಕಿನ ಕರಿಮನೆ ಗ್ರಾ.ಪಂ. ವ್ಯಾಪ್ತಿಯ ಕಾಡಿಗ್ಗೇರಿ ಉಮೇಶ್ ಜೊತೆ ಗೆಳೆತನ ಶುರುವಾಗಿ ನಂತರ ಪ್ರೇಮಾಂಕುರವಾಗಿ ಉಮೇಶ್ ನನ್ನು ಮದುವೆಯಾಗಲು ನಿರ್ಧರಿಸಿದ್ದಳು. ಈ ವಿಷಯವನ್ನು ಮನೆಯಲ್ಲಿ ಪ್ರಸ್ತಾಪ ಮಾಡಿದ್ದು, ಬೇರೆ ಬೇರೆ ಜಾತಿ ಎನ್ನುವ ಕಾರಣಕ್ಕೆ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ಪೋಷಕರ ವಿರೋಧದ ನಡುವೆಯೂ ಸೌಂದರ್ಯಾ ಮತ್ತು ಉಮೇಶ್ ಇಬ್ಬರೂ 2020 ರ ನವೆಂಬರ್ನಲ್ಲಿ ಮದುವೆಯಾಗಿದ್ದರು. ಇದು ತಿಳಿಯುತ್ತಿದ್ದಂತೆ ಎಲ್ಲಾದರೂ ಇರು, ಚೆನ್ನಾಗಿರು ಎಂದು ಹೇಳಿ ಆಕೆಯ ಪೋಷಕರು ಸುಮ್ಮನಾಗಿದ್ದರು. ಸೌಂದರ್ಯ ತನ್ನ ಗಂಡನ ಮನೆ ಕಾಡಿಗ್ಗೇರಿಯಲ್ಲೇ ಇದ್ದಳು.
2021ರ ಜೂ.8 ರಂದು ಗಂಡನ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಐಶ್ವರ್ಯಳ ಶವ ಪತ್ತೆಯಾಗಿತ್ತು. ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ಕೊಡುತ್ತಿದ್ದರು. ಐಶ್ವರ್ಯಳನ್ನು ಆಕೆಯ ಗಂಡನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತಳ ಪೋಷಕರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು. ಜೂ.10 ರಂದು ಐಶ್ವರ್ಯಳ ಅಂತ್ಯಕ್ರಿಯೆಗೆ ಅಕ್ಕ ಸೌಂದರ್ಯ ತನ್ನ ಗಂಡನೊಂದಿಗೆ ಬಂದು ಹೋಗಿದ್ದಳು. ಇದಾದ 17 ದಿನಕ್ಕೆ,ಅಂದರೆ ಜೂ.25 ರಂದು ಸೌಂದರ್ಯ ಕೂಡ ತನ್ನ ಗಂಡನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮೃತಳ ತಂದೆ ತಾಯಿ ಕುಸಿದು ಬಿದ್ದಿದ್ದಾರೆ. ಮಗಳ ಸಾವಿನಿಂದ ಆಕ್ರೋಶಗೊಂಡ ಆಕೆಯ ಪಾಲಕರು ಉಮೇಶನ ಮನೆ ಬಳಿಯೇ ಸೌಂದರ್ಯ ಅಂತ್ಯಕ್ರಿಯೆ ನಡೆಸಲು ಮುಂದಾಗಿ ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ನಂತರ ಫ್ಯಾನ್ ಗೆ ನೇಣು ಹಾಕಿದ್ದಾರೆ ಎಂದು ಮೃತಳ ತಂದೆ ಉದಯ್ ಆರೋಪಿಸಿದ್ದು, ಮಗಳ ಸಾವಿಗೆ ಅಳಿಯ ಉಮೇಶ್, ಆತನ ತಂದೆ ಪಾಂಡುರಂಗ, ತಾಯಿ ಶಾಂತಮ್ಮ, ಸಹೋದರಿ ರೂಪಾ ಕಾರಣ. ಬೇರೆ ಜಾತಿ ಎಂಬ ಕಾರಣಕ್ಕೆ ನನ್ನ ಮಗಳಿಗೆ ಹಿಂಸೆ ನೀಡಿದ್ದಾರೆ. ಅಲ್ಲದೆ ಉಮೇಶನಿಗೆ ಬೇರೊಂದು ಮದುವೆ ಮಾಡಲು ನಿರ್ಧರಿಸಿದ್ದರು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಕೂಲಿ ಕೆಲಸ ಮಾಡಿ ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ನಾಲ್ಕು ಹೆಣ್ಣುಮಕ್ಕಳನ್ನು ಸಾಕಿ ಸಲುಹಿದ್ದರು. ತಾವೇ ನೋಡಿ ಮದುವೆ ಮಾಡಿದ ಎರಡನೇ ಮಗಳು ಐಶ್ವರ್ಯ, ಮದುವೆ ಬೇಡವೆಂದು ಹೇಳಿ ಪ್ರೀತಿಸಿ ಮದುವೆಯಾಗಿದ್ದ ಸೌಂದರ್ಯ ಗಂಡನ ಮನೆಯಲ್ಲಿ ಸುಖವಾಗಿ ಬಾಳಿ ಬದುಕುತ್ತಾರೆ ಎಂದು ಕನಸು ಕಂಡಿದ್ದರು. ಆದರೆ ಒಂದೇ ತಿಂಗಳಲ್ಲಿ ಇಬ್ಬರು ದುರಂತ ಅಂತ್ಯಕಂಡಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.