ಹೊಸದಿಲ್ಲಿ: ಸಿಬಿಐಗೆ ಹೊಸ ಮುಖ್ಯಸ್ಥರ ನೇಮಕಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮುಂದಿಟ್ಟ ನಿಯಮವು ಕನಿಷ್ಠ ಇಬ್ಬರು ಅಧಿಕಾರಿಗಳನ್ನು, ಕಣದಿಂದ ಹೊರಗುಳಿಯುವಂತೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ, ಸಿಜೆಐ ಮತ್ತು ವಿರೋಧಪಕ್ಷದ ನಾಯಕ ಅಧೀರ್ ರಂಜನ್ ಚೌಧುರಿ ಅವರನ್ನು ಒಳಗೊಂಡ ಅತ್ಯುನ್ನತ ಅಧಿಕಾರ ಆಯ್ಕೆ ಸಮಿತಿ ನಡೆಸಿದ 90 ನಿಮಿಷಗಳ ಸಭೆಯಲ್ಲಿ ಮೂರು ಹೆಸರುಗಳಲ್ಲಿ ಯಾವ ಹೆಸರನ್ನೂ ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ.
ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್, ಸಶಸ್ತ್ರ ಸೀಮಾ ಬಲದ (ಎಸ್‌ಎಸ್‌ಬಿ) ಪ್ರಧಾನ ನಿರ್ದೇಶಕ ಕೆಆರ್ ಚಂದ್ರ ಮತ್ತು ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ ವಿಎಸ್‌ಕೆ ಕೌಮುದಿ ಹೆಸರು ಚರ್ಚೆಗೆ ಬಂದಿದ್ದವು. ಇವರಲ್ಲಿ ಅತಿ ಹಿರಿಯರಾದ ಸೊಬೋಧ್ ಕುಮಾರ್ ಜೈಸ್ವಾಲ್ ಹೆಸರು ಮುಂಚೂಣಿಯಲ್ಲಿದೆ. ಸಿಬಿಐ ನಿರ್ದೇಶಕರದ ನೇಮಕಾತಿ ಸಂದರ್ಭದಲ್ಲಿ ಹಿಂದೆಂದೂ ಪಾಲನೆಯಾಗದ ‘ಆರು ತಿಂಗಳ ನಿಯಮ’ದ ಬಗ್ಗೆ ಸಿಜೆಐ ರಮಣ ಪ್ರಸ್ತಾಪಿಸಿದರು ಎನ್ನಲಾಗಿದೆ.ಆರು ತಿಂಗಳಿಗಿಂತ ಕಡಿಮೆ ಸೇವಾವಧಿ ಹೊಂದಿರುವ ಅಧಿಕಾರಿಗಳನ್ನು ಪೊಲೀಸ್ ಮುಖ್ಯಸ್ಥರ ಹುದ್ದೆಗೆ ಪರಿಗಣಿಸಬಾರದು ಎಂಬ ಸುಪ್ರೀಂಕೋರ್ಟ್ ಆದೇಶವೊಂದನ್ನು ಸಿಜೆಐ ರಮಣ ಉಲ್ಲೇಖಿಸಿದರು. ಆಯ್ಕೆ ಸಮಿತಿಯು ಕಾನೂನಿಗೆ ಬದ್ಧವಾಗಿರಬೇಕು ಎಂದು ಅವರು ಹೇಳಿದರು. ಇದಕ್ಕೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಬೆಂಬಲ ವ್ಯಕ್ತಪಡಿಸಿದರು. ಇದರಿಂದ ಮೂವರು ಸದಸ್ಯರ ಸಮಿತಿಯಲ್ಲಿ ಒಂದು ಅಭಿಪ್ರಾಯಕ್ಕೆ ಬಹುಮತ ವ್ಯಕ್ತವಾದಂತಾಯಿತು.
ಈ ನಿಯಮವು, ಸರ್ಕಾರದ ಅಂತಿಮ ಪಟ್ಟಿಯಲ್ಲಿದ್ದ ಪ್ರಮುಖ ಹೆಸರುಗಳಾದ, ಆಗಸ್ಟ್ 31ರಂದು ನಿವೃತ್ತರಾಗಲಿರುವ ಗಡಿ ಭದ್ರತಾ ಪಡೆಯ ಮುಖ್ಯಸ್ಥ ರಾಕೇಶ್ ಆಸ್ಥಾನಾ, ಮೇ 31ರಂದು ನಿವೃತ್ತರಾಗಲಿರುವ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮುಖ್ಯಸ್ಥ ವೈಸಿ ಮೋದಿ ಅವರನ್ನು ಅನರ್ಹಗೊಳಿಸಲಿದೆ. ಸಿಬಿಐನಂತಹ ಉನ್ನತ ಸಂಸ್ಥೆಯ ಮುಖ್ಯಸ್ಥರ ಹುದ್ದೆಯ ನೇಮಕಾತಿಗೆ ಸರ್ಕಾರ ತೀರಾ ಸಾಮಾನ್ಯ ಪ್ರಕ್ರಿಯೆ ನಡೆಸುತ್ತಿದೆ ಎಂದು ಅಧೀರ್ ರಝಮನ್ ಚೌಧುರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೇ 11ರಂದು ನನಗೆ 109 ಹೆಸರುಗಳನ್ನು ನೀಡಲಾಗಿತ್ತು. ಸೋಮವಾರ ಮಧ್ಯಾಹ್ನ 1 ಗಂಟೆಗೆ 10 ಹೆಸರುಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಸಂಜೆ 4 ಗಂಟೆಯ ವೇಳೆಗೆ ಆರು ಹೆಸರುಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಫೆಬ್ರವರಿ ತಿಂಗಳಿನಿಂದಲೂ ಸಿಬಿಐ ಮುಖ್ಯಸ್ಥರ ಹುದ್ದೆ ಖಾಲಿಯಿದ್ದು, ಇದಕ್ಕಾಗಿ ಇದೇ ಮೊದಲ ಬಾರಿ ನೇಮಕಾತಿ ಸಮಿತಿ ಸಭೆ ನಡೆದಿದೆ. 1984-87ನೇ ಅವಧಿಯ ನಾಲ್ಕು ಅತಿ ಹಿರಿಯ ಬ್ಯಾಚ್‌ಗಳ ಐಪಿಎಸ್ ಅಧಿಕಾರಿಗಳನ್ನು ಇದಕ್ಕೆ ಪರಿಗಣಿಸಲಾಗುತ್ತಿದೆ.