Breaking News

ಬೆಳಗಾವಿ: ಕೋವಿಡ್ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಮುಂಜಾಗ್ರತಾ ಕ್ರಮ

Spread the love

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಏ.17ರಂದು ನಡೆಯಲಿದೆ. ಕೋವಿಡ್-19 ಎರಡನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ, ಮತಗಟ್ಟೆಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ. ಹರೀಶ್‌ಕುಮಾರ್‌ ತಿಳಿಸಿದರು.

ಇಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮತಯಂತ್ರವನ್ನು ಎಲ್ಲರೂ ಬಳಸುತ್ತಾರೆ ಎಂಬ ಆತಂಕ ಮತದಾರರಿಗೆ ಇದೆ. ರಾಜಕೀಯ ಪಕ್ಷದವರೂ ಈ ಬಗ್ಗೆ ಗಮನಸೆಳೆದಿದ್ದರು. ಹೀಗಾಗಿ, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಚುನಾವಣಾ ಆಯೋಗ ಹಾಗೂ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಮತದಾರರು ಮತ ಹಾಕುವುದಕ್ಕೆ ಮುನ್ನ ಹಾಗೂ ನಂತರ ಸ್ಯಾನಿಟೈಸರ್‌ ಬಳಸಲು ಅವಕಾಶ ಕಲ್ಪಿಸಲಾಗಿದೆ. ಮತಗಟ್ಟೆ ಪರಿಸರವನ್ನು ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸ್ಯಾನಿಟೈಸ್ ಮಾಡಲಾಗಿದೆ. ಹೀಗಾಗಿ, ಆತಂಕಪಡುವುದು ಬೇಡ’ ಎಂದು ಕೋರಿದರು.

‘ಎಲ್ಲರ ತಾಪಮಾನ ತಪಾಸಣೆ ಮಾಡಲಾಗುವುದು. ಯಾರಿಗಾದರೂ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ನಾವೇ ಕರೆದೊಯ್ದು ರ‍್ಯಾ‍‍ಪಿಡ್ ಆಂಟಿಜನ್‌ ಪರೀಕ್ಷೆ ನಡೆಸಲಾಗುವುದು. ಕೋವಿಡ್-19 ದೃಢಪಟ್ಟಲ್ಲಿ ಅವರಿಗೆ ಮತದಾನದ ಕೊನೆಯ ಒಂದು ಗಂಟೆಯಲ್ಲಿ ಪಿಪಿಇ ಕಿಟ್ ಹಾಕಿಸಿ ಮತದಾನ ಮಾಡಿಸಲಾಗುವುದು. ಮತದಾರರ ಪಟ್ಟಿಯಲ್ಲಿ ಹೆಸರಿರುವ ಎಲ್ಲರಿಗೂ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

‘ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಾಗಿ, ಶೇ 50ರಷ್ಟು ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಮಾಡಲಾಗುತ್ತಿದೆ. ಇದನ್ನು ಚುನಾವಣಾ ಆಯೋಗ ನೇರವಾಗಿ ವೀಕ್ಷಿಸುತ್ತದೆ ಮತ್ತು ದಾಖಲಿಸಿಕೊಳ್ಳುತ್ತದೆ. ಉಳಿದೆಡೆ ಸೂಕ್ಷ್ಮ ಅಬ್ಸರ್ವರ್‌, ವಿಡಿಯೊಗ್ರಫಿ ಮೂಲಕ ಕವರ್ ಮಾಡಲಾಗುವುದು. 5ಕ್ಕಿಂತ ಹೆಚ್ಚು ಮತಗಟ್ಟೆಗಳಿರುವಲ್ಲಿ ಸಿಆರ್‌ಪಿಎಫ್‌ ಭದ್ರತೆ ಒದಗಿಸಲಾಗಿದೆ. ನಮ್ಮ ಕ್ಷೇತ್ರದಲ್ಲಿ ಇತಿಹಾಸ ಗಮನಿಸಿದರೆ ಅಹಿತಕರ ಘಟನೆಗಳು ನಡೆದಿಲ್ಲ. ಆದರೂ ಜನರಲ್ಲಿ ಆತಂಕ ಬಾರದಂತೆ ನೋಡಿಕೊಳ್ಳಲು ಭದ್ರತೆ ಒದಗಿಸಿದ್ದೇವೆ. ಜನರು ನಿರ್ಭೀತಿಯಿಂದ ಬಂದು ನೈತಿಕ ಮತದಾನ ಮಾಡಬೇಕು’ ಎಂದು ಕೋರಿದರು.

‘ಮತಗಟ್ಟೆ ಸಿಬ್ಬಂದಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಲಾಗಿದೆ. 260 ಬಸ್‌ಗಳನ್ನು, ಸಾರಿಗೆ ಸಂಸ್ಥೆಯ100 ಬಸ್‌ಗಳನ್ನು ಬೆಳಗಾವಿ ಹಾಗೂ ಚಿಕ್ಕೋಡಿ ಡಿಪೊದಿಂದಲೇ ಪಡೆದಿದ್ದೇವೆ. 30 ಬಸ್‌ಗಳನ್ನು ಖಾಸಗಿಯವರಿಂದ ಪಡೆದಿದ್ದೇವೆ. ಹೆಚ್ಚುವರಿಯಾಗಿ ಲಭ್ಯ ಇವೆ. ಮತಗಟ್ಟೆ ಸಿಬ್ಬಂದಿಗೆ 3ನೇ ಬಾರಿಗೆ ತರಬೇತಿ ನೀಡಲಾಗಿದೆ. ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಗಿದೆ. ಮತದಾರರು ತಪ್ಪದೆ ಬಂದು ಮತ ಚಲಾಯಿಸಬೇಕು’ ಎಂದು ಮನವಿ ಮಾಡಿದರು.


Spread the love

About Laxminews 24x7

Check Also

ಕಾರ್ ಹಾಗೂ ಕೆ ಎಸ್ ಆರ್ ಟಿ ಸಿ. ಬಸ್ ಮಧ್ಯ ಭೀಕರ ಅಪಘಾತ

Spread the love ಅಥಣಿ ಹೊರವಲಯದಲ್ಲಿ ಬಸ್- ಕಾರ ಮಧ್ಯೆ ಭೀಕರ ಅಪಘಾತ ಕಾರ್ ಹಾಗೂ ಕೆ ಎಸ್ ಆರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ