Breaking News

ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಈಗ ಆಟೋ ಚಾಲಕ

Spread the love

ದಾವಣಗೆರೆ: ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದ, ಲಕ್ಷಾಂತರ ಮಕ್ಕಳ ಭವಿಷ್ಯಕ್ಕಾಗಿ ನಿರಂತರ ದುಡಿದ ವೈದ್ಯ, ಮೇಲಾಗಿ ಈಗ ಕೋವಿಡ್ ಕಾಲದ ಪರಿಸ್ಥಿತಿಯಲ್ಲಿ ದಿನದ ಕನಿಷ್ಟ 18 ಗಂಟೆಗಳ ಕಾಲ ಸೇವೆ ಸಲ್ಲಿಸುವ ಉತ್ಸಾಹದಲ್ಲಿ ಇರುವ ವೈದ್ಯ ಆಟೋ ಓಡಿಸಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

ಬಳ್ಳಾರಿ ಜಿಲ್ಲಾ ಲಸಿಕಾಧಿಕಾರಿ ಆಗಿದ್ದ ವ್ಯಕ್ತಿ ಆಟೋ ಚಾಲಕರಾಗಿದ್ದಾರೆ. ಆ ಆಟೋದ ಹೆಸರೇ “ಐಎಎಸ್ ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ’ ಎಂದು. ಇಷ್ಟಕ್ಕೂ ವೈದ್ಯ ಡಾ.ರವೀಂದ್ರನಾಥ್ ಎಂ.ಎಚ್ ಅವರು ಆಟೋ ಓಡಿಸಲು ಕಾರಣ ನಾಲ್ಕು ಜನ ಐಎಎಸ್ ಅಧಿಕಾರಿಗಳು ಎಂದು ಅವರೇ ಹೇಳುತ್ತಾರೆ.

ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಲಸಿಕಾಧಿಕಾರಿ ಅಂದರೆ ಆರ್ ಸಿಎಚ್. ಮೇಲಾಗಿ 24 ವರ್ಷ ವೈದ್ಯನಾಗಿ ಸೇವೆ ಸಲ್ಲಿಸಿದ ವೈದ್ಯ ಇಂದು ಆಟೋ ಓಡಿಸಲು ಕಾರಣವೆನೆಂದು ಡಾ.ರವೀಂದ್ರನಾಥ್ ಅವರನ್ನು ಕೇಳಿದರೆ, ಇದು ನಾಲ್ಕು ಜನ ಐಎಎಸ್ ಅಧಿಕಾರಿಗಳ ಪ್ರಸಾದವೆಂದು ಹೇಳುತ್ತಾರೆ.

ಸದ್ಯ ದಾವಣಗೆರೆ ನಗರದಲ್ಲಿ ಆಟೋ ಓಡಿಸುತ್ತಿದ್ದಾರೆ

ಮೂಲತಃ ದಾವಣಗೆರೆ ತಾಲೂಕಿನ ಬಾಡಾ ಗ್ರಾಮದ ನಿವಾಸಿ ಸದ್ಯ ದಾವಣಗೆರೆ ನಗರದಲ್ಲಿ ಆಟೋ ಓಡಿಸುತ್ತಿದ್ದು, ಯಾವುದೇ ಕೆಲಸ ಮೇಲು-ಕೀಳು ಅಲ್ಲ. ವ್ಯವಸ್ಥೆಯ ವಿರುದ್ಧ ನನ್ನ ಹೋರಾಟ. ನನ್ನ ಈ ಸ್ಥಿತಿಗೆ ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ ಪಾಂಡೆ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆಗಿದ್ದ ಜಾವೇದ್ ಅಕ್ತರ್, ಸದ್ಯ ಮಂಗಳೂರು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹಾಗೂ ಬಳ್ಳಾರಿ ಜಿ.ಪಂ ಸಿಇಒ ಕೆ. ನಿತೀಶ್ ಕಾರಣವೆಂದು ಆರೋಪಿಸಿದ್ದಾರೆ.

ಈ ನಾಲ್ವರು ಕೊಡಬಾರದ ಹಿಂಸೆ ಕೊಟ್ಟು ನನ್ನ ನೆಮ್ಮದಿ ಹಾಳು ಮಾಡಿದ್ದಾರೆ. ಅಲ್ಲದೆ ಮಾಡಬಾರದ ತಪ್ಪಿಗೆ ಸೇವೆಯಿಂದ ಅಮಾನತ್ತು ಮಾಡಿಸಿ, ಆಡಳಿತಾತ್ಮಕ ನ್ಯಾಯಾಲಯದಲ್ಲಿ ಕೇಸ್ ನನ್ನ ಪರವಾಗಿ ಆದರೂ ಪೋಸ್ಟಿಂಗ್ ಕೊಡದೇ ಹಿಂಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ನಾನು ಸಮಸ್ಯೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ

ನಾನು 15 ತಿಂಗಳಿಂದ ಬೀದಿಗೆ ಬಿದ್ದಿದ್ದು, ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಅದಕ್ಕಾಗಿ ಆಟೋ ಖರೀದಿಗೆ ಸಾಲ ಕೇಳಲು ಹೋದರೆ ಕೆನರಾ ಬ್ಯಾಂಕಿನವರು ಲೋನ್ ಕೊಡಲಿಲ್ಲ. ಬೇರೆ ಕಡೆ ಹಣದ ವ್ಯವಸ್ಥೆ ಮಾಡಿ ಆಟೋ ಖರೀದಿ ಮಾಡಿದ್ದೇನೆ. ನಾನು ಸಮಸ್ಯೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಬದಲಾಗಿ ದಿಟ್ಟತನದಿಂದ ಬದುಕುವೆ, ಆ ನಾಲ್ವರು ಐಎಎಸ್ ಅಧಿಕಾರಿಗಳಿಗೆ ಶಿಕ್ಷೆ ಕೊಡಿಸುವುದು ನನ್ನ ಉದ್ದೇಶ. ಈ ಬಗ್ಗೆ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವೆ ಎಂದು ಹೇಳಿದರು.

ಐಎಎಸ್ ಅಧಿಕಾರಿಗಳು ಮಾತ್ರ ನ್ಯಾಯಾಲಯದ ಆದೇಶ ಪಾಲಿಸುತ್ತಿಲ್ಲ

ಆಟೋ ಓಡಿಸುತ್ತಿರುವ ವೈದ್ಯ ರವೀಂದ್ರನಾಥ್ ಎಂ.ಎಚ್ ಹೇಳುವಂತೆ, “”ಈಗ ಕೊರೊನಾ ಕಾಲ, ಜನ ಜಾಸ್ತಿ ಓಡಾಡಲ್ಲ. ದಿನಕ್ಕೆ ಐದು ನೂರು ರೂಪಾಯಿ ಆಟೋದಿಂದ ಸಂಗ್ರಹ ಆಗುತ್ತದೆ. ಅದರಲ್ಲಿಯೇ ಜೀವನ. ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯ ನನ್ನ ಪರವಾಗಿ ಎರಡು ಸಲ ತೀರ್ಪು ಕೊಟ್ಟರೂ ಈ ನಾಲ್ವರು ಐಎಎಸ್ ಅಧಿಕಾರಿಗಳು ಮಾತ್ರ ನ್ಯಾಯಾಲಯದ ಆದೇಶವನ್ನೇ ಪಾಲನೆ ಮಾಡುತ್ತಿಲ್ಲ. ಮೇಲಾಗಿ ನಾನು ಸರ್ಕಾರಿ ಸೇವೆ ಬಿಟ್ಟು ಖಾಸಗಿ ಆಗಿ ಕ್ಲಿನಿಕ್ ಓಪನ್ ಮಾಡಲು ಸರ್ಕಾರದಿಂದ ಪರವಾನಗಿ ಬೇಕು. ಈ ಪರವಾನಗಿ ನೀಡುವರು ಅದೇ ಐಎಎಸ್ ಅಧಿಕಾರಿಗಳು. ಈಗ ಮತ್ತೆ ಅವರ ಹತ್ತಿರ ಹೋದರೆ ನ್ಯಾಯ ಸಿಗುವುದು ಕಷ್ಟ. ಹೀಗಾಗಿ ಸದ್ಯಕ್ಕೆ ಆಟೋದಲ್ಲಿಯೇ ಮುಂದುವರೆಯುವೆ” ಎನ್ನುತ್ತಾರೆ.

ವೈದ್ಯಾಧಿಕಾರಿ ಮಾತ್ರ ಬದುಕು ನಡೆಸಲು ಆಟೋ ಓಡಿಸಬೇಕಾಗಿದೆ

ವೈದ್ಯನ ಸಂಬಂಧಿ ಕಂದಗಲ್ ನಾಗರಾಜ್ ಅವರು ಮಾತನಾಡಿ, ವೈದ್ಯರನ್ನು ಈ ವೇಳೆ ದೇವರ ಇನ್ನೊಂದು ರೂಪ ಎನ್ನುತ್ತಾರೆ. ಆದರೆ ಇಲ್ಲಿ ಜಿಲ್ಲಾ ಮಟ್ಟದ ವೈದ್ಯಾಧಿಕಾರಿ ಮಾತ್ರ ಬದುಕು ನಡೆಸಲು ಆಟೋ ಓಡಿಸಬೇಕಾಗಿದೆ. ಹಾಗಂತ ಆಟೋ ಓಡಿಸುವುದು ಕೆಳಮಟ್ಟದ ಕೆಲಸ ಅಲ್ಲ. ಜನರ ಆರೋಗ್ಯ ಪಾಲನೆ ಮಾಡಬೇಕಾದ ವೈದ್ಯಾಧಿಕಾರಿ, ಇಂತಹ ವ್ಯಕ್ತಿ ಅದೇ ಕೆಲಸ ಮಾಡಬೇಕು. ಮೇಲಾಗಿ ನ್ಯಾಯಾಂಗ ನಿಂದನೆಯಂತಹ ಪ್ರಕರಣ ದಾಖಲಿಸಲು ಹತ್ತಾರು ಸಹ ಓಡಿದ್ದಾರೆ. ಸದ್ಯಕ್ಕೆ ಐಎಎಸ್ ಲಾಬಿಗೆ ಬುದ್ಧಿ ಕಲಿಸಬೇಕು. ಮೇಲಾಗಿ ಆರೋಗ್ಯ ಇಲಾಖೆಯಲ್ಲಿ ಇರುವ ವ್ಯಾಪಕ ಭ್ರಷ್ಟಾಚಾರ ಬಯಲಿಗೆ ತರುವುದು ವೈದ್ಯನ ಉದ್ದೇಶವಾಗಿದೆ” ಎಂದರು.


Spread the love

About Laxminews 24x7

Check Also

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಮಗ್ರ ಸಿದ್ಧತೆ:D.C.

Spread the loveಬೆಳಗಾವಿ: ರಾಜ್ಯಾದ್ಯಂತ ಮಾರ್ಚ್ 21 ರಿಂದ ಏಪ್ರಿಲ್ 04 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲಿದ್ದು, ಜಿಲ್ಲೆಯಲ್ಲಿ ಪರೀಕ್ಷೆಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ