ಬೆಂಗಳೂರು: ದೇಶದ ಇತಿಹಾಸದಲ್ಲಿ ದಾಖಲಾದ ವಿಚಾರವನ್ನ ಬಿಎಸ್‍ವೈ ಸರ್ಕಾರ ಶಾಲಾ ಪಠ್ಯಗಳಿಂದ ಕೈಬಿಡಲು ಹೊರಟಿರುವುದು ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿರುವ ಡಿಕೆಶಿ, ಪಠ್ಯಪುಸ್ತಕದಿಂದ ಕೈ ಬಿಟ್ಟ ವಿಚಾರ ಸಂಬಂಧ ಸಂಶೋಧಕರು, ಶಿಕ್ಷಣ ತಜ್ಞರೊಂದಿಗೂ ಚರ್ಚಿಸಲಾಗುವುದು. ಇತಿಹಾಸ ತಿರುಚುವ ಮೂಲಕ ಜನರ ದಾರಿ ತಪ್ಪಿಸುತ್ತಿರುವುದನ್ನು ವಿರೋಧಿಸಬೇಕಿದೆ. ಯಾವುದೇ ಕಾರಣಕ್ಕೂ ಇತಿಹಾಸ ಮರೆಮಾಚಲು ಬಿಡುವುದಿಲ್ಲ ಎಂದು ಆಗ್ರಹಿಸಿದ್ದಾರೆ.
ಟಿಪ್ಪು ಜಯಂತಿ ಆಚರಿಸುವುದು ಬಿಎಸ್‍ವೈ ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ಟಿಪ್ಪು ಸುಲ್ತಾನ್ ಹೆಸರಿಲ್ಲದೆ ಈ ದೇಶದ ಇತಿಹಾಸ ಅಪೂರ್ಣ ಎನ್ನುವುದು ವಾಸ್ತವ. ರಾಮ್‍ನಾಥ್ ಕೋವಿಂದ್ ಅವರು ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಟಿಪ್ಪು ಅವರ ಚರಿತ್ರೆ, ತ್ಯಾಗ, ದೇಶ ಭಕ್ತಿಯ ಬಗ್ಗೆ ಹಾಡಿ ಹೊಗಳಿರುವುದೇ ಇದಕ್ಕೆ ನಿದರ್ಶನ ಎಂದರು.
ಟಿಪ್ಪು ಸುಲ್ತಾನ್ ಇತಿಹಾಸ ಒಂದು ಧರ್ಮ, ವರ್ಗಕ್ಕೆ ಸೇರಿದ್ದಲ್ಲ, ದೇಶದ ಚರಿತ್ರೆಗೆ ಸಂಬಂಧಿಸಿದ್ದು. ಬ್ರಿಟಿಷ್ ಇತಿಹಾಸದಲ್ಲಿಯೂ ದಾಖಲಾಗಿರುವಂಥದ್ದು. ಮಕ್ಕಳಲ್ಲಿ ಇತಿಹಾಸದ ತಿಳುವಳಿಕೆ ಕಡಿಮೆ ಆಗುತ್ತಿರುವ ಕಾಲದಲ್ಲಿ ಬಿಎಸ್‍ವೈ ಸರ್ಕಾರ ಇಂತಹ ತೀರ್ಮಾನ ಸಮರ್ಥನೀಯವಲ್ಲ. ಹಾಗಾಗಿ ಇದನ್ನು ನಮ್ಮ ಪಕ್ಷ ವಿರೋಧಿಸಲಿದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕೋವಿಡ್ 19 ಹಿನ್ನೆಲೆಯಲ್ಲಿ 7ನೇ ತರಗತಿಯಲ್ಲಿದ್ದ ಟಿಪ್ಪು ಸುಲ್ತಾನ್ ಪಠ್ಯವನ್ನು ಸರ್ಕಾರ ಕೈಬಿಟ್ಟಿದ್ದು, 6 ಮತ್ತು 10ನೇ ತರಗತಿಯಲ್ಲಿ ಉಳಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಶೇ.30ರಷ್ಟು ಪಠ್ಯಗಳನ್ನ ಕಡಿತ ಮಾಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಒಂದರಿಂದ 10ನೇ ತರಗತಿವರೆಗೆ ಯಾವುದೇ ಪಾಠ ಅಥವಾ ಪಠ್ಯ ಪುನರಾವರ್ತನೆ ಆಗದಂತೆ ನೋಡಿಕೊಳ್ಳಲು ಶಿಕ್ಷಣ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದೆ
Laxmi News 24×7