ಮಹಿಳಾ ಪ್ರೀಮಿಯರ್ ಲೀಗ್ 2026 ರ 18 ನೇ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ನಡುವೆ ನಡೆಯಿತು. ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಏಕಪಕ್ಷೀಯ ಗೆಲುವು ದಾಖಲಿಸಿ ನೇರವಾಗಿ ಫೈನಲ್ಗೆ ಟಿಕೆಟ್ ಪಡೆದುಕೊಂಡಿದೆ. ಇತ್ತ ಆರ್‌ಸಿಬಿ ವಿರುದ್ಧ ಸೋತ ಯುಪಿ ವಾರಿಯರ್ಸ್ ಮೊದಲ ತಂಡವಾಗಿ ಅಧಿಕೃತವಾಗಿ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ಯುಪಿ ತಂಡ ಪ್ಲೇಆಫ್ ರೇಸ್ನಲ್ಲಿ ಜೀವಂತವಾಗಿರಬೇಕೆಂದರೆ ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಆದರೆ ಅದು ಆಗಲಿಲ್ಲ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ ಕೇವಲ 143 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಕೈಕೊಟ್ಟ ಯುಪಿ ಬ್ಯಾಟಿಂಗ್ ವಿಭಾಗ
ಈ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ, ಯುಪಿ ವಾರಿಯರ್ಸ್ ತಂಡವನ್ನು 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 143 ರನ್‌ಗಳಿಗೆ ಕಟ್ಟಿಹಾಕಿತು. ಯುಪಿ ವಾರಿಯರ್ಸ್ ತಂಡದ ಪರ ನಾಯಕಿ ಮೆಗ್ ಲ್ಯಾನಿಂಗ್ ಮತ್ತು ದೀಪ್ತಿ ಶರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಆದಾಗ್ಯೂ, ಇತರ ಯಾವುದೇ ಬ್ಯಾಟರ್ಗೆ ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ. ಮೇಗ್ ಲ್ಯಾನಿಂಗ್ 41 ರನ್ ಗಳಿಸಿದರೆ, ದೀಪ್ತಿ ಶರ್ಮಾ 55 ರನ್ ಗಳಿಸಿದರು. ಆದಾಗ್ಯೂ, ಇತರ ಯಾವುದೇ ಬ್ಯಾಟರ್ಗೆ 15 ರನ್ ಗಡಿ ದಾಟಲು ಸಾಧ್ಯವಾಗಲಿಲ್ಲ.
ಹ್ಯಾರಿಸ್, ಸ್ಮೃತಿ ಶತಕದ ಜೊತೆಯಾಟ
ಇತ್ತ ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಕೂಡ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ 37 ಎಸೆತಗಳಲ್ಲಿ 13 ಬೌಂಡರಿ ಮತ್ತು ಎರಡು ಸಿಕ್ಸರ್ ಸಹಿತ 75 ರನ್ ಬಾರಿಸಿದರೆ, ನಾಯಕಿ ಸ್ಮೃತಿ ಮಂಧಾನ ಕೂಡ ಅಜೇಯ ಅರ್ಧಶತಕ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 108 ರನ್‌ಗಳ ಜೊತೆಯಾಟವನ್ನಾಡಿತು. ಗ್ರೇಸ್ ಹ್ಯಾರಿಸ್ ಔಟಾದ ನಂತರ, ಸ್ಮೃತಿ ಮಂಧಾನ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅಂತಿಮವಾಗಿ ಆರ್‌ಸಿಬಿ 13.1 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್‌ಗಳ ನಷ್ಟಕ್ಕೆ ಗುರಿನ್ನು ತಲುಪಿತು.
ರೋಚಕತೆ ಸೃಷ್ಟಿಸಿದ ಪ್ಲೇಆಫ್ ರೇಸ್
ಮಹಿಳಾ ಪ್ರೀಮಿಯರ್ ಲೀಗ್‌ನ ಪ್ಲೇಆಫ್ ಹಂತಕ್ಕೆ ಒಟ್ಟು ಮೂರು ತಂಡಗಳು ಅರ್ಹತೆ ಪಡೆಯಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ಇದೀಗ ಎರಡು ಸ್ಥಾನ ಮಾತ್ರ ಬಾಕಿ ಉಳಿದಿವೆ. ಲೀಗ್ ಹಂತದಲ್ಲಿ ಕೇವಲ ಎರಡು ಪಂದ್ಯಗಳು ಉಳಿದಿದ್ದು, ಈ ಎರಡು ಪಂದ್ಯಗಳು ಉಳಿದ ತಂಡಗಳ ಭವಿಷ್ಯವನ್ನು ನಿರ್ಧರಿಸುತ್ತವೆ. ಮೊದಲ ಪಂದ್ಯ ಗುಜರಾತ್ ಮತ್ತು ಮುಂಬೈ ನಡುವೆ ನಡೆಯಲಿದ್ದು, ವಿಜೇತ ತಂಡ ಪ್ಲೇಆಫ್‌ಗೆ ಮುನ್ನಡೆಯುತ್ತದೆ. ಸೋತ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ನಡುವಿನ ಪಂದ್ಯದ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ.
Laxmi News 24×7