ಬೆಂಗಳೂರು, ಜು.11- ನಗರದ ಇನ್‍ಫೆಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಆಯುಕ್ತರ ಕಚೇರಿಯನ್ನು ಮತ್ತೊಮ್ಮೆ ಸೀಲ್‍ಡೌನ್ ಮಾಡಲಾಗಿದೆ.
ನಿನ್ನೆ 9 ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಯುಕ್ತರ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಈ ಸಂಜೆಗೆ ತಿಳಿಸಿದ್ದಾರೆ.
ಸೀಲ್‍ಡೌನ್ ಆಗಿರುವ ಆಯುಕ್ತರ ಕಚೇರಿಯನ್ನು ಮುಂದಿನ ಬುಧವಾರ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಹಿಂದೆಯೂ ಕಚೇರಿಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ತಕ್ಷಣ ಆಯುಕ್ತರ ಕಚೇರಿಯನ್ನು ಮೂರು ದಿನ ಸೀಲ್‍ಡೌನ್ ಮಾಡಲಾಗಿತ್ತು.
ಇದೀಗ 9 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸೀಲ್‍ಡೌನ್ ಮಾಡಲಾಗಿದೆ. ಧೈರ್ಯ ತುಂಬಿದ ಡಿಸಿಪಿ: ಉತ್ತರ ವಿಭಾಗದ ಎರಡೂ ಠಾಣೆಗಳ ಒಟ್ಟು 14 ಮಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ತೆರಳುತ್ತಿರುವ ಸಿಬ್ಬಂದಿಗೆ ಡಿಸಿಪಿ ಶಶಿಕುಮಾರ್ ಅವರು ಆತಂಕ ಪಡಬೇಡಿ ಎಂದು ಧೈರ್ಯ ತುಂಬಿದ್ದಾರೆ.
ನಿಮಗೆ ರೋಗ ಲಕ್ಷಣಗಳು ಕಂಡುಬಂದಿಲ್ಲ. ಸ್ವಯಂ ಪ್ರೇರಿತರಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಾಗ ಕೊರೊನಾ ಪಾಸಿಟಿವ್ ಇರುವುದು ಕಂಡುಬಂದಿದೆ. ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ.
ವೈದ್ಯರು ಹೇಳಿದಂತೆ ಸಮಯಕ್ಕೆ ಸರಿಯಾಗಿ ಊಟ ಮಾಡಿ ಔಷಧಿಗಳನ್ನು ತೆಗೆದುಕೊಳ್ಳಿ ಎಂದು ಆತ್ಮವಿಶ್ವಾಸ ತುಂಬಿದ್ದಾರೆ.ನೀವು ಕುಟುಂಬದವರ ಬಗ್ಗೆ ಚಿಂತಿಸಬೇಡಿ. ಒಂದು ವೇಳೆ ನಿಮ್ಮ ಕುಟುಂಬದವರಿಗೆ ಏನಾದರೂ ತೊಂದರೆಯಾದರೆ ಅವರ ಸಹಾಯಕ್ಕೆ ಎಸಿಪಿ ಹಾಗೂ ನಾವಿದ್ದೇವೆ.
ನಿಮ್ಮ ಕುಟುಂಬಕ್ಕೆ ನೆರವಾಗುತ್ತೇವೆ. ಕೊರೊನಾ ಸೋಂಕು ಇದೆ ಎಂದು ಅಂಜಬೇಡಿ. ಧೈರ್ಯವಾಗಿ ಚಿಕಿತ್ಸೆ ಪಡೆದು ಹಿಂದಿರುಗಿ ಎಂದು ಸಿಬ್ಬಂದಿಗೆ ಅಭಯ ನೀಡಿದ್ದಾರೆ. ಈ ವಿಭಾಗದಲ್ಲಿ ಇದುವರೆಗೂ 36 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ