ಬೆಂಗಳೂರು: ಪತಿ-ಪತ್ನಿ ಜಗಳದ ಮಧ್ಯೆ ಮಗು ಅತ್ತಿತೆಂದು ಎಸೆದು ತಂದೆಯೇ ತನ್ನ ಮೂರು ತಿಂಗಳ ಹೆಣ್ಣು ಮಗುವನ್ನು ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ನಡೆದಿದೆ.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಯಡವನಹಳ್ಳಿಯಲ್ಲಿ ಘಟನೆ ನಡೆದಿದ್ದು, ಜನನಿ ಮತ್ತು ಶ್ರೀನಿವಾಸ್ ದಂಪತಿಯ ಮಗು ಸ್ಪಂದನ ಸಾವನ್ನಪ್ಪಿದ ದುರ್ದೈವಿ. ಈ ದಂಪತಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕಿನ ನಿವಾಸಿಗಳಾಗಿದ್ದು, ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಪ್ರತಿ ದಿನ ಜಗಳ ಮಾಡುತ್ತಿದ್ದರು. ಅದೇ ರೀತಿ ಶನಿವಾರ ರಾತ್ರಿ 11 ಘಂಟೆಯ ಸುಮಾರಿಗೆ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ಮಗುವನ್ನು ಎತ್ತಿ ಎಸೆದು ಪಾಪಿ ತಂದೆ ಹತ್ಯೆ ಮಾಡಿದ್ದಾನೆ.
ದಂಪತಿ ಜಗಳ ಮಾಡುವಾಗ ಮೂರು ತಿಂಗಳ ಮಗು ಜೋಳಿಗೆಯಲ್ಲಿ ಮಲಗಿತ್ತು. ಶ್ರೀನಿವಾಸ್ ತನ್ನ ಪತ್ನಿ ಜನನಿಯನ್ನು ಸಿಟ್ಟಿನಲ್ಲಿ ಜೋರಾಗಿ ನೂಕಿದ್ದ. ನಂತರ ಜನನಿ ಮಗು ಮಲಗಿದ್ದ ಜೋಳಿಗೆ ಮೇಲೆ ಬಿದ್ದಿದ್ದಳು. ಆಗ ಮಗು ಅಳಲು ಶುರುಮಾಡಿತ್ತು. ಆಗ ಇದೋಂದು ಕಾಟ ಎಂದು ಪಾಪಿ ತಂದೆ ಮಗುವನ್ನು ತೆಗೆದು ಬಿಸಾಡಿದ್ದಾನೆ. ನಂತರ ಮಗು ಪ್ರಜ್ಞೆ ತಪ್ಪಿದ್ದು, ತಕ್ಷಣವೇ ತಾಯಿ ಜನನಿ ಮಗುವನ್ನು ಕರೆದುಕೊಂಡು ಹೊಸೂರಿಗೆ ಹೋಗಿದ್ದಾಳೆ. ಆಗ ಹೊಸೂರಿನ ಆಸ್ಪತ್ರೆಯಲ್ಲಿ ಮಗು ಸಾವನಪ್ಪಿದೆ. ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದು, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.