ಬೀದರ್ : ಡ್ಯೂಟಿಗೆ ತಡವಾಗಿ ಬಂದಿರುವುದನ್ನು ಪ್ರಶ್ನಿಸಿದ್ದ ಮಹಿಳಾ ಪಿಎಸ್‌ಐ ಮೇಲೆ ಪೊಲಿಸ್ ಪೇದೆಯೊಬ್ಬ ಹಲ್ಲೆ ಮಾಡಿರುವ ಘಟನೆ ರವಿವಾರ(ಸೆ29)ನಗರದಲ್ಲಿ ನಡೆದಿದ್ದು, ಪೇದೆಯನ್ನು ಅಮಾನತು ಮಾಡಲಾಗಿದೆ.
ಇಲ್ಲಿನ ಮಹಿಳಾ ಪೊಲೀಸ್ ಠಾಣೆ ಪಿಎಸ್‌ಐ ಮಲ್ಲಮ್ಮ ಎಂಬುವರೇ ಹಲ್ಲೆಗೊಳಗಾಗಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ ಪರೀಕ್ಷೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ನ್ಯೂಟೌನ್ ಠಾಣೆಯ ಪೇದೆ ಧನರಾಜ್ ಅವರು ಎರಡು ಗಂಟೆ ತಡವಾಗಿ ಹಾಜರಾಗಿದ್ದು, ಈ ಬಗ್ಗೆ ಪಿಎಸ್‌ಐ ಮಲ್ಲಮ್ಮ ಪ್ರಶ್ನಿಸಿದ್ದಾರೆ. ಈ ಕಾರಣಕ್ಕಾಗಿ ಸಿಟ್ಟಾದ ಪೇದೆ ಹಲ್ಲೆ ಮಾಡಿದ್ದಾರೆ ಎಂದು ಪಿಎಸ್‌ಐ ದೂರು ದಾಖಲಿಸಿದ್ದಾರೆ.
ಪರೀಕ್ಷಾ ಕೇಂದ್ರಕ್ಕೆ ಬೆ. 7.30 ರ ಬದಲಾಗಿ 9.15ಕ್ಕೆ ತಡವಾಗಿ ಬಂದಿದ್ದ ಧನರಾಜ್ ಅವರನ್ನು ಪಿಎಸ್‌ಐ ಅವರು ಮನಸ್ಸಿಗೆ ಬಂದಂತೆ ಬರುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಆಗ ನಿಮಗೆ ಬೇಕಾದರೆ ಕರ್ತವ್ಯಕ್ಕೆ ಗೈರು ಎಂದು ಹಾಕಿಕೊಳ್ಳಿ ಎಂದು ಪೇದೆ ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ವಿಷಯ ಇಷ್ಟಕ್ಕೆ ಮುಗಿಯಲಿಲ್ಲ. ಪಿಎಸ್‌ಐ ತಿಂಡಿ ತಿನ್ನುವಾಗ ಬಂದ ಪೇದೆ, ನಿಮಗೆ ಬೇಕಾದಂಥ ಶೂ ಹಾಕಿಕೊಳ್ಳುತ್ತೀರಾ ? ಹಿರಿಯ ಅಧಿಕಾರಿಗೆ ದೂರು ನೀಡುತ್ತೇನೆ ಎಂದು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಳ್ಳಲು ಮುಂದಾಗಿದ್ದು, ಆಗ ಮೊಬೈಲ್ ಕಸಿದುಕೊಂಡ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.