ಹುಬ್ಬಳ್ಳಿ: ಸದೃಢ ಸರಕಾರವನ್ನು ಬೀಳಿಸಬೇಕು ಎಂದು ಬಿಜೆಪಿ ನಾಯಕರು ಸಾಕಷ್ಟು ಯತ್ನಿಸಿದ್ದರು. ಇದಕ್ಕಾಗಿ ಶಾಸಕ ಖರೀದಿಗೂ ಮುಂದಾಗಿದ್ದರು. ಆದರೆ ಅದ್ಯಾವುದು ಕೈಗೂಡಲಿಲ್ಲ. ಇದರ ಭಾಗವೇ ರಾಜ್ಯಪಾಲರ ಮೂಲಕ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಿಸಿರುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆರೋಪಿಸಿದರು .
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಗಾದರೂ ಮಾಡಿ ಸರ್ಕಾರ ಕೆಡವಬೇಕು ಎನ್ನುವ ಉದ್ದೇಶ ಬಿಜೆಪಿಯವರು ಹೊಂದಿದ್ದಾರೆ. ಹಿಂದುಳಿದ ನಾಯಕ ಸಿದ್ದರಾಮಯ್ಯ ಅವರ ಮೇಲಿರುವ ಜನಪ್ರಿಯತೆಯನ್ನು ಕುಗ್ಗಿಸುವ ಹುನ್ನಾರವಿದು. ರಾಜ್ಯದ ಜನತೆ 136 ಶಾಸಕರನ್ನು ಗೆಲ್ಲಿಸಿರುವ ಸರಕಾರವನ್ನು ಅಭದ್ರ ಮಾಡಲು ಹೊರಟಿದ್ದಾರೆ. ಶಾಸಕರನ್ನು ಖರೀದಿಸಬೇಕು ಎಂದು ಯತ್ನಿಸಿದರೂ ಆಗಲಿಲ್ಲ. ಅಲ್ಲದೆ ರಾಜ್ಯಪಾಲರ ಮೂಲಕ ಮುಖ್ಯಮಂತ್ರಿಗಳ ವಿರುದ್ಧವೇ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಿಸಿದರು. ಹಾಗಾದರೆ ಬಿಜೆಪಿಯ ನಾಯಕರ ವಿರುದ್ಧ ಅನೇಕ ಆರೋಪಗಳೇ ಇಲ್ಲವೆ ? ರಾಜ್ಯಪಾಲರು ಕಾನೂನು ಪಾಲನೆ ಮಾಡಿದ್ದರೆ ಬಿಜೆಪಿ ನಾಯಕರ ಪ್ರಕರಣಗಳಲ್ಲಿ ಯಾಕೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಯಾಕೆ ರಾಜೀನಾಮೆ ನೀಡಬೇಕು. ರೆಫಲ್ ಡೀಲ್, ಎಲೆಕ್ಟ್ರೋ ಬಾಂಡ್ ವಿಚಾರದಲ್ಲಿ ಪ್ರಧಾನ ಮಂತ್ರಿ ರಾಜೀನಾಮೆ ಕೊಡಬೇಕು. ಇಲ್ಲಿ ಎಂಟೂವರೇ ಸಾವಿರ ಕೋಟಿ ಹಗರಣ ಆಗಿದೆ. ಹೀಗಾಗಿ ಪ್ರಧಾನಿಗಳು ಯಾಕೆ ರಾಜೀನಾಮೆ ಕೊಡಬಾರದು. ಇಷ್ಟೆಲ್ಲಾ ಮಾತನಾಡುವ ಪ್ರಹ್ಲಾದ ಜೋಶಿಯವರು ತಮ್ಮ ಪ್ರಧಾನಿಗಳಿಗೆ ಒಂದು ಸುದ್ದಿಗೋಷ್ಠಿ ಮಾಡಲು ಹೇಳಿ, ಆಗ ನಿಮ್ಮ ಮೋದಿಯವರು ಎಷ್ಟು ಬುದ್ದಿವಂತರು ಎಂಬುವುದು ಎಲ್ಲರಿಗೂ ಗೊತ್ತಾಗಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಆರೋಪಗಳಿಗೆ ಟಾಂಗ್ ನೀಡಿದರು.