ಮಹಾಲಿಂಗಪುರ: ರೈತ ಸಮುದಾಯವು ಜಾಣತನದಿಂದ ಒಕ್ಕಲುತನ ಮಾಡಿದರೆ ಕಡಿಮೆ ಜಮೀನು, ಅಲ್ಪಾವಧಿಯಲ್ಲಿಯೇ ಲಾಭವನ್ನು ಮಾಡಿಕೊಳ್ಳಬಹುದು ಎಂಬುದನ್ನು ರಬಕವಿ ಬನಹಟ್ಟಿ ತಾಲ್ಲೂಕಿನ ಕೆಸರಗೊಪ್ಪ ಗ್ರಾಮದ ಯುವ ರೈತ ಬಸವರಾಜ ಶ್ರೀಶೈಲ ಸತ್ತಿಗೇರಿ ಸಾಧಿಸಿ ತೋರಿಸಿದ್ದಾರೆ.
ಅಂತರ ಬೆಳೆಯಾಗಿ ಕೊತ್ತಂಬರಿ ಸೊಪ್ಪು :
ಒಟ್ಟು 3.18 ಎಕರೆ ಜಮೀನು ಹೊಂದಿರುವ ಸಣ್ಣ ರೈತರಾದ ಬಸವರಾಜ ಸತ್ತಿಗೇರಿ ಅವರು ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ 25 ಗುಂಟೆ ಜಮೀನಿನಲ್ಲಿ ಕಳೆದ ಮೇ18 ರಂದು ಅರಿಶಿನ ನಾಟಿ ಮಾಡಿದ್ದಾರೆ. ನಂತರ ಐದು ದಿನ ಬಿಟ್ಟು ಮೇ22 ರಂದು ಅಂತರ ಬೆಳೆಯಾಗಿ 35 ಕೆಜಿ ಕೊತ್ತಂಬರಿ ಬೀಜವನ್ನು ಹಾಕಿದ್ದರು. ಕೇವಲ 35 ದಿನಗಳಲ್ಲಿ ಕೊತ್ತಂಬರಿ ಸೊಪ್ಪು ಬೆಳೆದಿದೆ. ಬಸವರಾಜ ಅವರು ಇನ್ನುಳಿದ ಜಮೀನಿನಲ್ಲಿ ಕಬ್ಬನ್ನು ಬೆಳೆಯುತ್ತಿದ್ದಾರೆ.
ಗುತ್ತಿಗೆ ವ್ಯಾಪಾರ :
ಕೇವಲ ಒಂದು ತಿಂಗಳ ಐದು ದಿನಗಳಲ್ಲಿ ಬೆಳೆದ ಕೊತ್ತಂಬರಿ ಸೊಪ್ಪನ್ನು ತರಕಾರಿ ವ್ಯಾಪಾರಸ್ಥರಿಗೆ ಬರೊಬ್ಬರಿ 60 ಸಾವಿರಕ್ಕೆ ಗುತ್ತಿಗೆ ಮಾರಾಟ ಮಾಡಿದ್ದಾರೆ. ಗುತ್ತಿಗೆ ಪಡೆದ ವ್ಯಾಪಾರಿಯು ಕೂಲಿಯಾಳುಗಳ ಮೂಲಕ ಸೊಪ್ಪನ್ನು ಕಿತ್ತುಕೊಂಡು ಹೋಗಿದ್ದಾರೆ. ಇದರಿಂದ ರೈತನಿಗೆ ಕೂಲಿಯಾಳಿನ ಖರ್ಚು, ಸಾಗಾಣಿಕೆ ವೆಚ್ಚ ಮತ್ತು ವ್ಯಾಪಾರ ಮಾಡುವ ಸಮಸ್ಯೆಯಿಲ್ಲದೆ ನೇರವಾಗಿ ಲಾಭವನ್ನು ಕಂಡಿದ್ದಾರೆ. ಅರಿಶಿನ ಬೆಳೆಯ ಎಲೆಗಳು ದೊಡ್ಡದಾಗಿ ಅಗತಿ ಮಾಡುವುದರೊಳಗೆ ಇನ್ನೊಮ್ಮೆ ಕೊತ್ತಂಬರಿ ಸೊಪ್ಪನ್ನು ಬೆಳೆಯಬಹುದಾಗಿದೆ
Laxmi News 24×7