ಬೆಳಗಾವಿ: ಬೆಳಗಾವಿ (Belagavi) ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಸದನಲ್ಲಿ ಚರ್ಚಿಸುವಂತೆ ಬಿಜೆಪಿ (BJP) ಹೈಕಮಾಂಡ್ ನಾಯಕರು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರಿಗೆ ಸೂಚನೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಈ ಬಗ್ಗೆ ಪ್ರತಿಭಟನೆ ನಡೆಸಲು ಬಿಜೆಪಿ ಮುಂದಾಗಿದೆ.
ಈ ಬಗ್ಗೆ ಬೆಳಗಾವಿಯಲ್ಲಿ (Belagavi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕಳೆದ ವಾರ ಬೆಳಗಾವಿ ಗ್ರಾಮಾಂತರದ ವಂಟಮೂರಿಯಲ್ಲಿ ದಲಿತ ಮಹಿಳೆಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ಈ ವಿಚಾರವಾಗಿ ಇಂದು (ಡಿ.15) ಅಧಿವೇಶನ ಮುಗಿದ ನಂತರ ಬೆಳಗಾವಿ ಚೆನ್ನಮ್ಮ ಸರ್ಕಲ್ನಲ್ಲಿ ಮಧ್ಯಾಹ್ನ 3.30 ಕ್ಕೆ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.
ನಾಳೆ ಕೇಂದ್ರದಿಂದ ಒಂದು ತಂಡ ಬೆಳಗಾವಿಗೆ ಭೇಟಿ ನೀಡಲಿದೆ. ಐದು ಜನ ಸಂಸದರು (ಅಪರಾಜಿತ್ ಸಾರಂಗಿ, ಸುನೀತಾ ದುಗ್ಗಲ್, ರಂಜಿತಾ ಕೋಲಿ, ಲಾಕೆಟ್ ಚಟರ್ಜಿ, ಆಶಾ ಲಾಕಡಾ) ಅವರು ಸಂತ್ರಸ್ತೆ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಲಿದ್ದಾರೆ. ಬೆಳಗಾವಿ ಅಧಿವೇಶನ ನಡೆಯುವ ಸಂದರ್ಭದಲ್ಲೇ ಘಟನೆ ನಡೆದಿದ್ದು ಖಂಡನೀಯ ಎಂದು ಹೇಳಿದರು.
ನಾನು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಗೆ ಸಾಂತ್ವನ ಹೇಳಿ ಬಂದಿದ್ದೇನೆ. ಗೃಹ ಸಚಿವ ಡಾ.ಪರಮೇಶ್ವರ್ (Dr. G. Parameshwar) ಭೇಟಿ ನೀಡಿದ್ದಾರೆ, ಸ್ವಾಗತಿಸುತ್ತೇವೆ. ಮಹಿಳೆ ಬೆತ್ತಲೆಗೊಳಿಸಿದ ಘಟನೆ ರಾಜ್ಯದ ಜನ ತಲೆ ತಗ್ಗಿಸುವಂಥದ್ದು. ರಾಜ್ಯ ಸರ್ಕಾರ ಪ್ರಕರಣ ಲಘುವಾಗಿ ಪರಿಗಣಿಸಿದೆ ಎಂದು ವಾಗ್ದಾಳಿ ಮಾಡಿದರು.