ನವದೆಹಲಿ: ದೇಶದ ಕಂಡ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಒಂದಾದ ಒಡಿಶಾದ ಬಾಲಸೋರ್ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಶನಿವಾರ ಚಾರ್ಜ್ಶೀಟ್ ಸಲ್ಲಿಸಿದೆ.
ಈಗಾಗಲೇ ಬಂಧಿತ ರೈಲ್ವೆ ಇಲಾಖೆಯ ಮೂವರು ಅಧಿಕಾರಿಗಳ ವಿರುದ್ಧ ಭುವನೇಶ್ವರದಲ್ಲಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 2ರಂದು ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ನಿಲ್ದಾಣದ ಸಮೀಪ ತ್ರಿವಳಿ ರೈಲು ದುರಂತ ಸಂಭವಿಸಿತ್ತು. ಕೋರಮಂಡಲ್ ಎಕ್ಸ್‌ಪ್ರೆಸ್ ನಿಂತಿದ್ದ ಸರಕು ರೈಲಿಗೆ ಗುದ್ದಿತ್ತು. ನಂತರ ಇದರ ಕೆಲವು ಹಳಿತಪ್ಪಿದ ಕೋಚ್‌ಗಳು ಪಕ್ಕದ ಹಳಿಗಳ ಮೇಲೆ ಬಿದ್ದಿದ್ದವು. ಇದರಿಂದ ಎದುರಿಗೆ ಬರುತ್ತಿದ್ದ ಯಶವಂತಪುರ – ಹೌರಾ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತ್ತು. ಇದರಲ್ಲಿ 296 ಜನರು ಸಾವನ್ನಪ್ಪಿದ್ದರು ಮತ್ತು1,200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ದುರಂತ ದೇಶವನ್ನೇ ಬೆಚ್ಚಿಬೀಳಿಸಿತ್ತು.
ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ರೈಲ್ವೆ ಮಂಡಳಿ ವಹಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯ ಉದ್ದೇಶವಲ್ಲದ ಅಪರಾಧಿತ ನರಹತ್ಯೆ ಮತ್ತು ಸಾಕ್ಷ್ಯನಾಶದ ಆರೋಪದ ಮೇಲೆ ರೈಲ್ವೆ ಇಲಾಖೆಯ ಮೂವರು ಅಧಿಕಾರಿಗಳಾದ ಅರುಣ್ ಕುಮಾರ್ ಮಹಂತ, ಅಮೀರ್ ಖಂಡ್ ಮತ್ತು ಪಪ್ಪು ಕುಮಾರ್ ವಿರುದ್ಧ ಚಾರ್ಜ್ ಶೀಟ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Laxmi News 24×7