ಬೆಂಗಳೂರು: ಬಿಜೆಪಿ ವಿರುದ್ಧ ಸರ್ಕಾರ ಮತ್ತೊಂದು ತನಿಖಾಸ್ತ್ರ ಬಿಟ್ಟಿದೆ. ಕೋವಿಡ್ ಅಕ್ರಮಗಳ ತನಿಖೆಗೆ ನಿವೃತ್ತ ನ್ಯಾಯಾಧೀಶ ಮೈಕೆಲ್ ಡಿ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿ ಸರ್ಕಾರ ಆದೇಶಿಸಿದೆ.
ಈ ಸಂಬಂಧ ಮೂರು ತಿಂಗಳೊಳಗೆ ವರದಿ ಕೊಡಲು ಆಯೋಗಕ್ಕೆ ಸೂಚನೆ ನೀಡಿ ಒಳಾಡಳಿತ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಈ ಮೊದಲು ಕೋವಿಡ್ ಕಾಲದ ಅಕ್ರಮಗಳ ಬಗ್ಗೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಹಲವು ಆರೋಪಗಳನ್ನು ಮಾಡಿತ್ತು. ಅಂದು ಪ್ರತಿಪಕ್ಷವಾಗಿ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡಿತ್ತು. ಇದೀಗ ಲೆಕ್ಕಪತ್ರಗಳ ಸಮಿತಿ ಮಾಡಿದ್ದ ಆರೋಪಗಳ ತನಿಖೆ ನಡೆಸುವಂತೆ ಆಯೋಗಕ್ಕೆ ಸೂಚನೆ ನೀಡಲಾಗಿದೆ. ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣದ ಬಗ್ಗೆಯೂ ವಿಚಾರಣಾ ಆಯೋಗ ತನಿಖೆ ನಡೆಸಲಿದೆ. ಜೊತೆಗೆ ಔಷಧ ಖರೀದಿ ಅಕ್ರಮ ಆರೋಪ, ವೈದ್ಯಕೀಯ ಉಪಕರಣಗಳ ಖರೀದಿ ಅಕ್ರಮ ಆರೋಪ, ಬೆಡ್ ಹಂಚಿಕೆ ಅಕ್ರಮ ಆರೋಪಗಳ ಬಗ್ಗೆ ತನಿಖೆ ಮಾಡಲಿದೆ.
40% ಕಮಿಷನ್ ಆರೋಪ ತನಿಖೆಗೆ ಆಯೋಗ ರಚನೆ: ಇನ್ನು ಬಿಜೆಪಿ ಸರ್ಕಾರದ ಅವಧಿಯ ಶೇ.40 ಕಮಿಷನ್ ಆರೋಪ ಪ್ರಕರಣ ತನಿಖೆಗೆ ಈ ಹಿಂದೆ ತನಿಖಾ ಸಮಿತಿ ರಚಿಸಿ ಸರ್ಕಾರ ಆದೇಶಿಸಿತ್ತು. ಇದೀಗ ಸಮಿತಿ ರಚನೆಯ ಆದೇಶ ರದ್ದು ಮಾಡಿ ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿ ಒಳಾಡಳಿತ ಇಲಾಖೆ ಆದೇಶ ಹೊರಡಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಾದ ಕಾಮಗಾರಿಗಳು, ಟೆಂಡರ್, ಪ್ಯಾಕೇಜ್ಗಳು, ಪುನರ್ ಅಂದಾಜು, ಹೆಚ್ಚುವರಿ ಅಂದಾಜು, ಬಾಕಿ ಬಿಡುಗಡೆ ಬಗ್ಗೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿದ ಆರೋಪಗಳ ತನಿಖೆಗೆ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ವಿಚಾರಣಾ ಆಯೋಗದಿಂದ ಪರಿಶೀಲನೆ ನಡೆಯಲಿದೆ.
Laxmi News 24×7