Breaking News

ಒಣದ್ರಾಕ್ಷಿ ಬೆಲೆ ಕುಸಿತದಿಂದ ಬೆಳೆಗಾರರು ಅಕ್ಷರಶಃ ಕಂಗಾಲ

Spread the love

ಚಿಕ್ಕೋಡಿ (ಬೆಳಗಾವಿ) : ಒಣದ್ರಾಕ್ಷಿ ಬೆಲೆ ಕುಸಿತದಿಂದ ಬೆಳೆಗಾರರು ಅಕ್ಷರಶಃ ಕಂಗಾಲಾಗಿದ್ದು, ರಾಜ್ಯ ಸರ್ಕಾರ ತುರ್ತಾಗಿ ಬೆಳೆ ಖರೀದಿ ಮಾಡಿ ತಮ್ಮ ನೆರವಿಗೆ ಬರುವಂತೆ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ವಿಜಯಪುರ ಜಿಲ್ಲೆಯನ್ನು ಬಿಟ್ಟರೆ ಬೆಳಗಾವಿ ಜಿಲ್ಲೆಯ ರಾಯಬಾಗ, ಕಾಗವಾಡ, ಅಥಣಿ, ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ಅತಿ ಹೆಚ್ಚು ದ್ರಾಕ್ಷಿ ಬೆಳೆಗಾರರನ್ನು ಹೊಂದಿರುವ ಪ್ರದೇಶ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಆದರೆ, ಈ ಬಾರಿ ಬೆಲೆ ಕುಸಿತದಿಂದ ಸಾವಿರಾರು ಟನ್ ಒಣ ದ್ರಾಕ್ಷಿ ಮಾರಾಟವಾಗದೇ ಕೋಲ್ಡ್ ಸ್ಟೋರೇಜ್​ನಲ್ಲಿ ದಾಸ್ತಾನಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರಸ್ತುತ ವರ್ಷ 80 ರಿಂದ 110 ರೂ. ವರೆಗೆ ಒಂದು ಕೆ.ಜಿ ಒಣದ್ರಾಕ್ಷಿ ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ಭಾರಿ ಪ್ರಮಾಣದ ನಷ್ಟ ಉಂಟಾಗಿದೆ. ಒಂದು ಕೆ.ಜಿ ಒಣದ್ರಾಕ್ಷಿ ತಯಾರಾಗುವುದಕ್ಕೆ 140 ರೂಪಾಯಿ ಖರ್ಚಾಗುತ್ತದೆ. ಆದರೆ, ಸದ್ಯದ ದರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಪ್ರತಿ ವರ್ಷ 220 ರಿಂದ 280 ರೂಪಾಯಿವರೆಗೆ ಮಾರಾಟವಾಗುತ್ತಿತ್ತು. ಈ ವರ್ಷ ದರ ಕುಸಿತವಾಗಿದ್ದು, ಸರ್ಕಾರ ಆದಷ್ಟು ಬೇಗ ನಮ್ಮ ನೆರವಿಗೆ ಬರಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ದ್ರಾಕ್ಷಿ ಬೆಳೆಗಾರರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಕುರಿತು ದ್ರಾಕ್ಷಿ ಬೆಳೆಗಾರರು ಹಾಗೂ ಅಥಣಿ ಮಾಜಿ ಶಾಸಕ ಶಹಜಾನ್ ಡೊಂಗರಗಾಂವ ಮಾತನಾಡಿ, “ರಾಜ್ಯದಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಗಾರರನ್ನು ಈ ಭಾಗ ಹೊಂದಿದೆ. ಆದರೆ, ಸದ್ಯದ ದರ ಕುಸಿತದಿಂದ ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ. ಕಣ್ಣೀರು ಸುರಿಸುವ ಸನ್ನಿವೇಶ ನಿರ್ಮಾಣವಾಗಿದೆ. ದ್ರಾಕ್ಷಿ ಬೆಳೆಗಾರ ನಾಲ್ಕು ಹಂತದಲ್ಲಿ ಸಾಲವನ್ನು ಮಾಡಿರುತ್ತಾರೆ. ಪ್ರತಿ ಎಕರೆಗೆ ಮೂರು ಲಕ್ಷ ರೂಪಾಯಿ ಖರ್ಚು ಆಗುತ್ತದೆ. ನಾಟಿ ಮಾಡುವಾಗ, ಬೆಳೆ ಬೆಳೆಯಲು, ಫಸಲು ತೆಗೆಯುವಾಗ, ಮಾರಾಟ ಮಾಡುವಾಗ ರೈತರಿಗೆ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಬೆಳೆಗಾರರು ಸಾಲದ ಸೂಲದಲ್ಲಿ ಸಿಲುಕಿದ್ದಾರೆ. ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿ ಒಣದ್ರಾಕ್ಷಿ ಖರೀದಿ ಮಾಡಬೇಕು, ಬೆಲೆ ಕುಸಿತದಿಂದ ಸಾವಿರಾರು ಟನ್ ಒಣ ದ್ರಾಕ್ಷಿ ಕೋಲ್ಡ್ ಸ್ಟೋರೇಜ್​ನಲ್ಲಿ ದಾಸ್ತಾನು ಮಾಡಲಾಗಿದೆ. ಸರ್ಕಾರ ಖರೀದಿ ಮಾಡಿ ಅಂಗನವಾಡಿ, ಗರ್ಭಿಣಿಯರಿಗೆ, ಸರ್ಕಾರಿ ಶಾಲೆ ಮಕ್ಕಳಿಗೆ, ಸೈನಿಕರಿಗೆ ವಿತರಣೆ ಮಾಡಿ ನಮ್ಮ ನೆರವಿಗೆ ಮುಂದಾಗಬೇಕು ಎಂದಿದ್ದಾರೆ


Spread the love

About Laxminews 24x7

Check Also

ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳಕರ

Spread the love ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳಕರ ಎಂಎಲ್ಸಿ ರವಿಕುಮಾರ್ ವಿರುದ್ಧ ಲಕ್ಷ್ಮೀ ಹೆಬ್ಬಾಳಕರ್ ವಾಗ್ದಾಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ