Breaking News

ಜರ್ಮನಿಯಲ್ಲಿ ನಡೆದ 8ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಬೆಳಗಾವಿಯ ಚಿಕ್ಕನಂದಿ ಗ್ರಾಮದ ಮಂಜುಳಾ ಶಿವಾನಂದ ಗೊರಗುದ್ದಿ ಅವರು ಒಂದೊಂದು ಚಿನ್ನ, ಬೆಳ್ಳಿ, ಕಂಚಿನ ಪದಕ ಗೆದ್ದಿದ್ದಾರೆ.

Spread the love

ಬೆಳಗಾವಿ : ಸಾಧಿಸುವ ಛಲವೊಂದಿದ್ದರೆ ಸಾಕು ಗೆಲುವು ನಮ್ಮದೆ ಎಂದು ಅನೇಕ ಮಂದಿ ಸಾಬೀತು ಮಾಡಿದ್ದಾರೆ. ಈ ಮಾತನ್ನು ಇದೀಗ ಜಿಲ್ಲೆಯ ಯುವತಿಯೊಬ್ಬರು ತೋರಿಸಿಕೊಟ್ಟಿದ್ದಾರೆ. ಬಡ್ಡಿ ಸಾಲ ಪಡೆದು ಜರ್ಮನಿಯಲ್ಲಿ ನಡೆದ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಬೆಳಗಾವಿಯ ಕುವರಿಯೊಬ್ಬರು ಮೂರು ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ.

ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಮಂಜುಳಾ ಶಿವಾನಂದ ಗೊರಗುದ್ದಿ ಅವರು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡರೆ, ಚಕ್ರ ಎಸೆತದಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಹಾಗೆಯೇ, ಜಾವೆಲಿನ್ ಥ್ರೋದಲ್ಲಿ ಮೂರನೇ ಸ್ಥಾನ ಗಳಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಸುಮಾರು 2.5 ಲಕ್ಷ ರೂ. ಹಣ ಹೊಂದಿಸಿ ದೂರದ ಜರ್ಮನಿಗೆ ಹೋಗಿದ್ದ ಮಂಜುಳಾ, ಪದಕ ಗೆಲ್ಲುವ ಮೂಲಕ ತಮ್ಮ ಕನಸು ನನಸು ಮಾಡಿಕೊಂಡಿದ್ದಲ್ಲದೆ, ವಿದೇಶದಲ್ಲೂ ಬೆಳಗಾವಿ ಜಿಲ್ಲೆಯ ಕೀರ್ತಿ ಹೆಚ್ಚುವಂತೆ ಮಾಡಿದ್ದಾರೆ. ಜುಲೈ 28ರಿಂದ ಆಗಸ್ಟ್ 4ರವರೆಗೆ ಜರ್ಮನಿಯಲ್ಲಿ ಆಯೋಜಿಸಿದ್ದ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ತನ್ನ ಸಾಮರ್ಥ್ಯ ಸಾಬೀತು ಮಾಡಿರುವ ಮಂಜುಳಾ ಅವರು ಮೂರು ದಿನಗಳಲ್ಲಿ ಪದಕಗಳೊಂದಿಗೆ ತವರಿಗೆ ಮರಳಲಿದ್ದಾರೆ.

ಪದಕ ಗೆದ್ದ ಬೆನ್ನಲ್ಲೇ ಜರ್ಮನಿಯಿಂದಲೇ ವಿಡಿಯೋ ಮೂಲಕ ಸಂತಸ ಹಂಚಿಕೊಂಡ ಮಂಜುಳಾ, “ನಾನು 8ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಭಾಗವಹಿಸಿ, ಮೂರು ಪದಕಗಳನ್ನು ಪಡೆದುಕೊಂಡಿದ್ದೇನೆ. ಈ ಗೆಲುವನ್ನು ನನ್ನ ತಾಯಿ ಮತ್ತು ಭಾರತ ಮಾತೆಗೆ ಅರ್ಪಿಸುತ್ತೇನೆ. ಮತ್ತಷ್ಟು ಸಾಧನೆ ಮಾಡಬೇಕೆಂಬ ಹುಮ್ಮಸ್ಸು ಬಂದಿದೆ. ಸಹಕಾರ ನೀಡಿದ ಎಲ್ಲರಿಗೂ ನನ್ನ ಧನ್ಯವಾದಗಳು” ಎಂದು ತಿಳಿಸಿದ್ದಾರೆ.

ಬಡತನದಲ್ಲೇ ಅರಳಿರುವ ಈ ಪ್ರತಿಭೆ ವಿಶ್ವ ಕುಬ್ಜರ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುವ ಬಗ್ಗೆ ಈಟಿವಿ ಭಾರತ ವರದಿ ಮಾಡಿತ್ತು. ಈ ವೇಳೆ ಮಾತನಾಡಿದ್ದ ಮಂಜುಳಾ, “ಕಳೆದ ಮೂರು ವರ್ಷಗಳಿಂದ ನಾನು ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದೇನೆ. ಈವರೆಗೆ ರಾಷ್ಟ್ರ ಮಟ್ಟದಲ್ಲಿ 2, ರಾಜ್ಯ ಮಟ್ಟದಲ್ಲಿ 3 ಚಿನ್ನದ ಪದಕ ಗೆದ್ದಿದ್ದೇನೆ. ಈಗ ಜರ್ಮನಿಗೆ ಹೋಗ್ತಿರೋದು ಬಹಳ ಖುಷಿಯಾಗಿದೆ. ಆದರೆ ಸಾಲ ಮಾಡಿ ಹೋಗ್ತಿದ್ದೇನೆ. ಒಂದಿಷ್ಟು ದಾನಿಗಳು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ” ಎಂದು ತಿಳಿಸಿದ್ದರು.


Spread the love

About Laxminews 24x7

Check Also

ವಿಜಯಪುರ…:ಪಿಪಿಪಿ ವಿರುದ್ಧ ಭುಗಿಲೆದ್ದ ಆಕ್ರೋಶ: ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Spread the love ವಿಜಯಪುರ…:ಪಿಪಿಪಿ ವಿರುದ್ಧ ಭುಗಿಲೆದ್ದ ಆಕ್ರೋಶ: ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ