ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿಗಳ ಯೋಜನೆ ಪೈಕಿ ಒಂದಾದ ಗೃಹಜ್ಯೋತಿ ಯೋಜನೆ ಇಂದಿನಿಂದ ಜಾರಿಗೆ ಬರುತ್ತಿದ್ದು, ಜುಲೈನಲ್ಲಿ ಬಳಸಿದ ವಿದ್ಯುತ್ ಬಿಲ್ ಇಂದಿನಿಂದ ಬರಲಿದ್ದು, ಈ ಬಿಲ್ ಶೂನ್ಯ ಬಿಲ್ ಆಗಿರಲಿದೆ.
ನಿಗದಿತ ಬಳಕೆ ಮೀರಿದ ಯೂನಿಟ್ಗೆ ಮಾತ್ರ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗಲಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದಿನಿಂದ ಗೃಹ ಜ್ಯೋತಿ ಯೋಜನೆ ಜಾರಿ ಮಾಡಲಾಗುತ್ತಿದೆ. ಈವರೆಗೂ 1.42 ಕೋಟಿ ಜನರಿಂದ ನೋಂದಣಿ ಮಾಡಿಕೊಳ್ಳಲಾಗಿದೆ. ಅರ್ಹತೆ ಅನುಸಾರ ಉಚಿತ ಬಿಲ್ ಅನ್ವಯ ನಿಗದಿತ ಬಳಕೆಯೊಳಗೆ ಯೂನಿಟ್ ಬಳಕೆದಾರರಿಗೆ ಉಚಿತ ಬಿಲ್ ನೀಡಲಾಗುತ್ತದೆ. 200 ಯೂನಿಟ್ ಮೀರಿದರೆ ಪೂರ್ಣ ಪ್ರಮಾಣದ ಬಿಲ್ ಪಾವತಿ ಮಾಡಬೇಕು ಎಂದು ತಿಳಿಸಿದರು.
ಬಾಡಿಗೆದಾರರಿಗೂ ಯೋಜನೆ ಜಾರಿಯಾಗಿದೆ, ಬಾಡಿಗೆದಾರರಿಗೆ 53 ಯೂನಿಟ್ ಪ್ಲಸ್ 10 ಪರ್ಸೆಂಟ್ ಯೂನಿಟ್ ನಿಗದಿ ಮಾಡಲಾಗಿದೆ. ಮೀರಿದರೆ ಮಾತ್ರ ಹೆಚ್ಚುವರಿ ಯೂನಿಟ್ಗೆ ಬಿಲ್ ಪಾವತಿ ಮಾಡಬೇಕು. ಮನೆ ಮಾಲೀಕರು ಎಷ್ಟೇ ಆರ್.ಆರ್ ಸಂಖ್ಯೆ ಹೊಂದಿದ್ದರೂ ಒಂದಕ್ಕೆ ಮಾತ್ರ ಯೋಜನೆಯ ಲಾಭ ಸಿಗಲಿದೆ, ಆದರೆ ಮನೆ ಮಾಡಿಗೆ ನೀಡಿದ್ದರೆ ಮಾತ್ರ ಬಾಡಿಗೆದಾರರಿಗೂ ಯೋಜನೆಯ ಲಾಭ ಸಿಗಲಿದೆ. ಆದರೆ, ಯೋಜನೆಯಡಿ ಇದ್ದೂ 200 ಯೂನಿಟ್ ಬಳಕೆ ಮೀರಿದರೆ ಪೂರ್ಣ ಯೂನಿಟ್ಗೂ ಬಿಲ್ ಪಾವತಿಸಬೇಕು ಎಂದರು
ಯೋಜನೆಗೆ ನೋಂದಾಯಿಸಿಕೊಳ್ಳಲು ಕಾಲಮಿತಿ ಇಲ್ಲ: ಹೊಸದಾಗಿ ನೋಂದಾಯಿಸಿಕೊಳ್ಳಲು ಇನ್ನು ಅವಕಾಶವಿದೆ.
ಜುಲೈ 22 ರೊಳಗೆ ನೋಂದಾಯಿಸಿಕೊಂಡವರಿಗೆ ಆಗಸ್ಟ್ ಮೊದಲ ವಾರದಲ್ಲಿ ಬರುವ ಬಿಲ್ ಶೂನ್ಯ ಬಿಲ್ ಆಗಿರಲಿದೆ. ಆಗಸ್ಟ್ 22 ರೊಳಗೆ ನೋಂದಾಯಿಸಿಕೊಂಡರೆ ಸೆಪ್ಟೆಂಬರ್ನಲ್ಲಿ ಬರುವ ಬಿಲ್ ಶೂನ್ಯ ಬಿಲ್ ಆಗಿರಲಿದೆ ಎಂದರು. 200 ಯೂನಿಟ್ ಮೀರಿದ ಬಳಕೆದಾರ ಬಳಕೆ ಮತ್ತೊಂದು ವರ್ಷದ ಸರಾಸರಿ ಪರಿಗಣಿಸಿ ಮುಂದಿನ ವರ್ಷ 200 ಯೂನಿಟ್ ಬಳಕೆ ಒಳಗಿನ ಪ್ರಮಾಣ ಬಂದರೆ ಅವರಿಗೂ ಮತ್ತೆ ಅವಕಾಶ ನೀಡಲಿದ್ದೇವೆ ಎಂದರು.