ಕಲಬುರಗಿ: 4 ವರ್ಷದ ಹೆಣ್ಣು ಮಗುವಿನೊಂದಿಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಜ್‌ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ. ತಾಜ್ ಸುಲ್ತಾನಪುರ ಗ್ರಾಮದ ಹಿರಾಬಾಯಿ ದುಬಲಗುಂಡ್ಡಿ (38) ಹಾಗೂ ಇವರ ಪುತ್ರಿ ಸೌಜನ್ಯ ದುಬಾಲಗುಂಡ್ಡಿ (4) ಮೃತರು ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಕೌಟುಂಬಿಕ ಕಲಹಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸೋಮವಾರ ಬೆಳಗ್ಗೆ ಮನೆಯಿಂದ ಮಗುವಿನೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಗ್ರಾಮದ ಹೊರವಲಯದ ಜಮೀನಲ್ಲಿರುವ ತೆರೆದ ಬಾವಿಯಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಶವ ಹೊರ ತೆಗೆದಿದ್ದಾರೆ. ಶವ ಹೊರ ತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಜಿಲ್ಲೆಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂವರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ: ಇನ್ನೊಂದೆಡೆ ಇಬ್ಬರು ಗಂಡು ಹಾಗೂ ಹೆಣ್ಣು ಮಗುವಿನೊಂದಿಗೆ ಮಹಿಳೆ ನಾಪತ್ತೆಯಾಗಿರುವ ಪ್ರಕರಣ ನಗರದಲ್ಲಿ ವರದಿ ಆಗಿದೆ. ನಗರದ ಭರತನಗರ ತಾಂಡಾದಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಪತಿ ಗೌಂಡಿಯಾಗಿದ್ದು, ಕೆಲಸದ ವೇಳೆ ಮೇಲಿಂದ ಬಿದ್ದು ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದಾನೆ.
ಗಂಡನ ಸಾವಿನ ನಂತರ ಮಹಿಳೆ ತನ್ನ ಪತಿಯ ಅಣ್ಣನ ಮನೆಯಲ್ಲಿ ವಾಸವಿದ್ದಳು. ಆದರೆ, ಏಕಾಏಕಿ ಮಹಿಳೆ ತನ್ನ ಮಕ್ಕಳೊಂದಿಗೆ ಕಾಣೆಯಾಗಿದ್ದಾಳೆ. ಅಂಗಡಿಗೆ ಹೋಗಿ ಹಾಲು ತರುವುದಾಗಿ ಹೇಳಿ ಹೋದವಳು ಮರಳಿ ಬಂದಿಲ್ಲ ಎಂದು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾಣೆಯಾದವರ ಶೋಧಕಾರ್ಯ ನಡೆಸಿದ್ದಾರೆ.