ಚಿಕ್ಕೋಡಿ(ಬೆಳಗಾವಿ): ಕಳೆದ 15 ವರ್ಷಗಳಿಂದ ‘ಅಹಿಂಸೆ ಪರಮೋಧರ್ಮ’ ಎಂದು ಶಾಂತಿ ಮಂತ್ರ ಸಾರುತ್ತ ಧರ್ಮ ಪ್ರಚಾರ ಮಾಡಿದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಜೈನ ಆಶ್ರಮದ ಕಾಮಕುಮಾರ ನಂದಿ ಮಹಾರಾಜ (51) ಅವರು ಕಳೆದ ಎರೆಡು ದಿನಗಳ ಹಿಂದೆ ಭೀಕರವಾಗಿ ಹತ್ಯೆಗೀಡಾಗಿದ್ದರು. ನಂದಿ ಪರ್ವತ ಆಶ್ರಮದಲ್ಲಿ ಜೈನ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆಯನ್ನು ಇಂದು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.
ಜೈನ ಮಠಗಳ ಮಹಾಸ್ವಾಮಿಗಳಾದ ನಾಂದಣಿ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿ ಹಾಗೂ ವರೂರ್ ಮಠದ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಜೈನ ಧರ್ಮದ ಧಾರ್ಮಿಕ ವಿಧಿವಿಧಾನಗಳಂತೆ ಕಾಮಕುಮಾರ ನಂದಿ ಮಹಾರಾಜರ ಅಂತ್ಯಕ್ರಿಯೆ ನೆರವೇರಿತು. ಅಂತ್ಯಕ್ರಿಯೆ ಸ್ಥಳವನ್ನು ಭಟ್ಟಾರಕ ಶ್ರೀಗಳಿಂದ ಮೊದಲಿಗೆ ಗುರುತಿಸಿ ಶುದ್ಧೀಕರಣ ಮಾಡಿ, ಯಜ್ಞ ಪೂಜೆ ನಂತರ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಜಿನೈಕ್ಯರಾದ ಕಾಮಕುಮಾರ ನಂದಿ ಮಹಾರಾಜರು ಉಪಯೋಗಿಸುತ್ತಿದ್ದ ಪಿಂಚಿ, ಕಮಂಡಲು ತೆಂಗಿನ ಮರಕ್ಕೆ ಕಟ್ಟಿ ಅಂತಿಮ ವಿಧಿ ವಿಧಾನಗಳನ್ನು ಮುಂದುವರಿಸಲಾಯಿತು. ಪೂರ್ವಾಶ್ರಮದ ಮೃತ ಶ್ರೀಗಳ ಅಣ್ಣನ ಮಗ ಭೀಮಗೊಂಡ ಉಗಾರೆ ಅಂತಿಮ ವಿಧಿವಿಧಾನ ನೆರವೇರಿಸಿದರು.