Breaking News

ಪಂಚಮಸಾಲಿ ಮೀಸಲಾತಿ ವಿಚಾರ: ಆದಷ್ಟು ಬೇಗ ಸಿಎಂ ಸಿದ್ದರಾಮಯ್ಯ ಆಡಳಿತಾತ್ಮಕ ಸಭೆ ಕರೆದು ತೀರ್ಮಾನಿಸಲಿ

Spread the love

ಬೆಳಗಾವಿ: ಈ ಬಾರಿ ನಮ್ಮ ಪಂಚಮಸಾಲಿ ಸಮಾಜ ಬಹುತೇಕ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿರುವ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮಗೆ ನ್ಯಾಯ ಕೊಡಿಸುವ ವಿಶ್ವಾಸವಿದೆ‌. ಆ ನಿಟ್ಟಿನಲ್ಲಿ ಆದಷ್ಟು ಬೇಗನೆ ಮುಖ್ಯಮಂತ್ರಿಗಳು ಆಡಳಿತಾತ್ಮಕ ಸಭೆ ಕರೆದು ತಮ್ಮ ಜೊತೆ ಮಾತುಕತೆ ನಡೆಸಬೇಕು ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಇಂದು ನಗರದ ಗಾಂಧಿ ಭವನದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ಚಳವಳಿ ಒಂದು ಹಂತಕ್ಕೆ ಬಂದ ವೇಳೆ ಚುನಾವಣೆ ಬಂತು. ಈಗ ಹೊಸ ಸರ್ಕಾರ ಬಂದು ಇಂದಿಗೆ ಒಂದು ತಿಂಗಳಾಯಿತು. ಹೀಗಾಗಿ ಇಂದು ಬೆಳಗ್ಗೆ ಕಾನೂನು ಘಟಕದ ವಕೀಲರ ಜೊತೆಗೆ ಒಂದು ಸಮಾಲೋಚನಾ ಸಭೆ ಮಾಡಿ ಮುಂದಿನ‌ ಹೋರಾಟದ ಕುರಿತು ಚರ್ಚಿಸಿದ್ದೇವೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಹಕ್ಕೊತ್ತಾಯ ಮಂಡಿಸುವ ಬಗ್ಗೆ ಚರ್ಚೆಯಾಗಿದೆ ಎಂದು ವಿವರಿಸಿದರು.

ಗೊಂದಲದಲ್ಲಿ ಸಮುದಾಯದ ವಿದ್ಯಾರ್ಥಿಗಳು: ಪಂಚಮಸಾಲಿ ಮೀಸಲಾತಿ ಹೋರಾಟ ಕಾನೂನು ಮೆಟ್ಟಿಲು ಹತ್ತಿದೆ. ಒಂದು ಕಡೆ ಹೈಕೋರ್ಟ್, ಮತ್ತೊಂದು ಕಡೆ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದೆ. ಇಂದು ನಮ್ಮ‌ ಸಮುದಾಯದ ವಿದ್ಯಾರ್ಥಿಗಳು ಜನಗಣತಿ ಮತ್ತು ಶಾಲಾ ದಾಖಲಾತಿ ಸಂದರ್ಭದಲ್ಲಿ ಉದ್ಯೋಗದ ಸಂದರ್ಭದಲ್ಲಿ ಯಾವುದನ್ನು ಬರೆಸಬೇಕು ಎಂಬ ಗೊಂದಲದಲ್ಲಿದ್ದಾರೆ.

ಈ ಮಾಧ್ಯಮಗೋಷ್ಟಿ ಮೂಲಕ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್​ ಅವರಿಗೆ ಹಕ್ಕೊತ್ತಾಯ ಮಂಡಿಸುತ್ತಿದ್ದೇನೆ. ತಾವು ಸಾಮಾಜಿಕ ನ್ಯಾಯದ ಪರವಾಗಿ ಇದ್ದವರು, ನಮ್ಮ ಮೀಸಲಾತಿ ಹೋರಾಟದ ಆಳ ಅಗಲ ಸಮಗ್ರವಾಗಿ ಬಲ್ಲವರು. ಈಗಾಗಲೇ ತಮ್ಮ ಸರ್ಕಾರ ಬಂದ‌ ನಂತರ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳ ಸ್ವಾಮೀಜಿಗಳ ಸಭೆ ಕರೆದು ಚರ್ಚಿಸಿದ್ದೀರಿ. ಅದೇ ರೀತಿ ನಮ್ಮನ್ನು ಕರೆದು ನಮಗೆ ಯಾವ ರೀತಿ ನ್ಯಾಯ ಕೊಡಿಸುತ್ತಿರಿ ಎಂಬುದನ್ನು ಸ್ಪಷ್ಟಪಡಿಸಬೇಕು. ಪಂಚಮಸಾಲಿ ಶಾಸಕರನ್ನೊಳಗೊಂಡ ಹೋರಾಟಗಾರರ ನಿಯೋಗದ ಭೇಟಿಗೆ ಅವಕಾಶ ನೀಡಬೇಕು‌. ಆಡಳಿತಾತ್ಮಕ ಸಭೆಗೆ ನಮ್ಮನ್ನು ಆಹ್ವಾನಿಸಬೇಕು. ಕಾನೂನಾತ್ಮಕ ಬೆಳವಣಿಗೆಗಳು, ಯಾವ ರೀತಿ ನ್ಯಾಯ ಕೊಡಿಸುತ್ತೀರಿ ಎಂಬುದನ್ನು ತಿಳಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.

ಸಿಎಂ ಭೇಟಿ ಮಾಡಿ ಮುಂದಿನ ಹೋರಾಟ ನಿರ್ಧಾರ: ತಮ್ಮ ಅವಧಿಯಲ್ಲಿ ಸ್ಪಷ್ಟವಾದ ಮೀಸಲಾತಿ ನೀಡಬೇಕು. ಈವರೆಗೆ ಆಗಿರುವ ಹೋರಾಟ, ಕಾನೂನಾತ್ಮಕ ಬೆಳವಣಿಗೆಗಳು ಅದನ್ನು ತಮ್ಮ ಸರ್ಕಾರದಲ್ಲಿ ಯಾವ ರೀತಿ ಸರಿಪಡಿಸುತ್ತಿರಿ ಎಂಬುದನ್ನು ಸ್ಪಷ್ಟಪಡಿಸಬೇಕು. ಅದೇ ರೀತಿ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಲಿಂಗಾಯತ ಎಲ್ಲ ಒಳ ಪಂಗಡಗಳನ್ನು ಸೇರಿಸುವ ನಿಟ್ಟಿನಲ್ಲಿ ಯಾವ ನಿಲುವು ತೆಗೆದುಕೊಳ್ಳುತ್ತಿರಿ ಎಂಬುದನ್ನು ಸ್ಪಷ್ಟಪಡಿಸಿ ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ