Breaking News

ಗ್ಯಾರಂಟಿಯಲ್ಲಿ ದೋಖಾ; ಹೇಳುವುದೊಂದು, ಮಾಡುವುದೊಂದು ಮಾಡಿದ್ದಾರೆ : ಮಾಜಿ ಸಿಎಂ ಬೊಮ್ಮಾಯಿ‌

Spread the love

ಬೆಂಗಳೂರು : ಐದು ಗ್ಯಾರಂಟಿಗಳನ್ನು ಕೊಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈಗ ಕೊಟ್ಟ ಮಾತನ್ನು ಸಂಪೂರ್ಣವಾಗಿ ನಡೆಸಿಲ್ಲ.

ಹೇಳುವುದೊಂದು, ಮಾಡುವುದೊಂದು ಮಾಡಿದ್ದಾರೆ. ಹಾಗಾಗಿ ನಾಳೆ ಗ್ಯಾರಂಟಿಗಳ ಜಾರಿ ಬಗ್ಗೆ ಸರ್ಕಾರದ ಆದೇಶ ಬರುತ್ತದೆ. ಆ ಆದೇಶವನ್ನು ಸ್ಟಡಿ ಮಾಡಿ ನಂತರ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುವ ಮೂಲಕ ಜನರ ಬಳಿ ಹೋಗುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದ್ದಾರೆ.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಖಂಡಿತವಾಗಿ ಗ್ಯಾರಂಟಿಗಳ ವಿಚಾರದಲ್ಲಿ ಸರ್ಕಾರಿ ಆದೇಶವಾದ ನಂತರ ಜನರ ಬಳಿ ಹೋಗುತ್ತೇವೆ. ಇದರಲ್ಲಿ ಸಾಕಷ್ಟು ಹಿಡನ್ ಅಜೆಂಡಾ ಇದೆ. ಚುನಾವಣಾ ಪೂರ್ವದಲ್ಲಿ ಜನರಿಗೆ ಬಹಳಷ್ಟು ದೊಡ್ಡ ಬೆಟ್ಟದಷ್ಟು ಭರವಸೆ ತೋರಿಸಿದ್ದರು. ಜನರ ನಿರೀಕ್ಷೆಗಳನ್ನು ದೊಡ್ಡಮಟ್ಟದಲ್ಲಿ ಇರಿಸಿ ಕಾಂಗ್ರೆಸ್ ಚುನಾವಣೆ ಗೆದ್ದಿದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಚುನಾವಣಾ ಪೂರ್ವದ ಮಾತು, ಚುನಾವಣಾ ನಂತರದ ಮಾತುಗಳಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಎಲ್ಲರಿಗೂ 200 ಯೂನಿಟ್ ಕರೆಂಟ್ ಫ್ರೀ ಅಂತಾ ಘಂಟಾ ಘೋಷವಾಗಿ ಹೇಳಿದ್ದಾರೆ. ಅವರು ಹೇಳಿದ ಪ್ರಕಾರ ವಿದ್ಯುತ್ ಬಳಕೆ 200 ಯೂನಿಟ್ ಒಳಗೆ ಇದ್ದರೆ ಉಚಿತ ಕೊಡಬೇಕು. ಇಂದು ಸಿಎಂ ಮಾತಿನಲ್ಲಿ ಬಹಳ ವ್ಯತ್ಯಾಸ ಇದೆ. ಅಂದರೆ 200 ಯೂನಿಟ್ ಫ್ರೀ ಅಲ್ಲ ಸಾಮಾನ್ಯ ಜನ 75-80 ಯೂನಿಟ್ ಅಷ್ಟೇ ಬಳಸುತ್ತಾರೆ ಅಂತಾ ಗೊತ್ತಿದ್ದರೂ 200 ಯೂನಿಟ್ ಫ್ರೀ ಅಂತಾ ಹೇಳಿ ಯಾಮಾರಿಸಿದ್ದಾರೆ ಎಂದು ಕಾಂಗ್ರೆಸ್​ ವಿರುದ್ದ ಬೊಮ್ಮಾಯಿ ಕಿಡಿಕಾರಿದರು.

ಈ ರೀತಿ ಹೇಳಿ ಗ್ಯಾರಂಟಿಯಲ್ಲಿ ದೋಖಾ ಮಾಡುತ್ತಾ ಇದ್ದಾರೆ ಅನ್ನೋದು ಸ್ಪಷ್ಟವಾಗಿ ಬೆಳಕಿಗೆ ಬಂದಿದೆ. ಅನ್ನಭಾಗ್ಯದಲ್ಲಿ ಹೆಚ್ಚುವರಿ ಕೊಡುವುದು ಬರೀ 5 ಕೆಜಿ ಮಾತ್ರ. ರಾಜ್ಯಕ್ಕೆ 5 ಕೆಜಿ ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆಯಡಿ ಉಚಿತ ಕೊಡುತ್ತಿದೆ. ಇಂದು ರಾಜ್ಯದಲ್ಲಿ 5 ಕೆಜಿ ಅಕ್ಕಿ ಜೊತೆಗೆ 1 ಕೆಜಿ ರಾಗಿ, ಜೋಳ ಕೊಡಲಾಗುತ್ತದೆ 10 ಕೆಜಿಯಲ್ಲಿ ಅಕ್ಕಿ ಜೊತೆ ರಾಗಿ, ಜೋಳ ಇದೆಯೋ ಇಲ್ಲವೋ ಎಂಬುದು ಸ್ಪಷ್ಟ ಆಗಿಲ್ಲ ಎಂದು ಗ್ಯಾರಂಟಿ ಷರತ್ತುಗಳನ್ನು ಬೊಮ್ಮಾಯಿ ಟೀಕಿಸಿದರು.

ಗೃಹ ಲಕ್ಷ್ಮಿಯಲ್ಲಿ ಬಹಳ ದೊಡ್ಡ ಮೋಸ ಇದೆ : ಈಗ ಖಾತೆ, ಆಧಾರ್ ನಂಬರ್, ಮನೆಯ ಯಜಮಾನಿ, ಆನ್ ಲೈನ್ ಅರ್ಜಿ ಎಂದು ಹೇಳಿದ್ದಾರೆ. ವಿದ್ಯಾವಂತರಿದ್ದರೆ ಆನ್ ಲೈನ್ ನಲ್ಲಿ ಸಾಧ್ಯ. ಆನ್ ಲೈನ್ ನಲ್ಲೇ ಅರ್ಧ ಅರ್ಜಿಗಳನ್ನು ಇವರು ತೆಗೆದು ಹಾಕುತ್ತಾರೆ. ನಾವು ಫಲಾನುಭವಿಗಳನ್ನು ಸಬಲೀಕರಣ ಮಾಡಬೇಕು ಪ್ರತಿ ಹಳ್ಳಿಯ ಪಿಡಿಒ ಮೂಲಕ ಮಾಹಿತಿ ಪಡೆದು ಈ ತಿಂಗಳಿನಿಂದಲೇ ಹಣ ಕೊಡಬಹುದಿತ್ತು. ಜೂನ್, ಜುಲೈ ತಿಂಗಳ ಹಣ ಸೇರಿಸಿ ಆಗಸ್ಟ್ ನಲ್ಲಿ ಕೊಡ್ತಾರೋ, ಅಥವಾ ಆಗಸ್ಟ್ ನಿಂದಲೇ ಕೊಡ್ತಾರೋ ಎಂಬ ಸ್ಪಷ್ಟತೆ ಇಲ್ಲ. ಮಾತಿಗೆ ತಪ್ಪಬಾರದು ಅಂದರೆ ಜೂನ್, ಜುಲೈ ಸೇರಿಸಿ ಕೊಡಬೇಕು ಎಂದು ಬಸವರಾಜ್​ ಬೊಮ್ಮಾಯಿ ಒತ್ತಾಯಿಸಿದರು.

ಮಹಿಳೆ ಉಚಿತ ಬಸ್​ ಪ್ರಯಾಣದಲ್ಲೂ ದೋಖಾ : ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಲ್ಲಿ ಯಾವ ಬಸ್ ಗಳು ಅಂತಾ ಹೇಳುವುದರಲ್ಲೂ ಯಾಮಾರಿಸಿದ್ದಾರೆ. ಎಸಿ ಬಸ್ ಇಲ್ಲ ಎಂದರು. ನಾನ್ ಎಸಿ ಸ್ಲೀಪರ್ ಇಲ್ಲ ಅಂದರು. ನಂತರ ರಾಜ ಹಂಸದಲ್ಲಿ ಇಲ್ಲ ಎಂದರು. ಬರೀ ಕೆಂಪು ಬಸ್ ನಲ್ಲಿ ಮಾತ್ರ ಅವಕಾಶ ಇದೆ ಎಂದರು. ಮೊದಲೇ ಹೇಳಬಹುದಿತ್ತಲ್ಲ.

ಪದವಿ ಬಳಿಕ ಹೆಚ್ಚಿನವರು ಉನ್ನತ ವ್ಯಾಸಂಗಕ್ಕೆ ಹೋಗುತ್ತಾರೆ. ಕನಿಷ್ಠ ಮೂರು ವರ್ಷಗಳಿಂದ ನಿರುದ್ಯೋಗಿಗಳಾಗಿರುವವರಿಗೆ ಕೊಟ್ಟರೆ ಅನುಕೂಲ ಆಗುತ್ತಿತ್ತು. ಈ ಯೋಜನೆಗಳ ಬಗ್ಗೆ ಸರ್ಕಾರ ಸಮರ್ಪಕ ಮರು ಪರಿಶೀಲನೆ ಮಾಡಬೇಕು. ವೆಚ್ಚ ಮತ್ತು‌ ಆದಾಯದ ಹೆಚ್ಚಳದ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಕೇಂದ್ರ ಯೋಜನೆಗೆಳಿಗೆ ರಾಜ್ಯದ ಪಾಲು ನಿಲ್ಲಿಸುತ್ತಾರಾ? ಜನರ ಧ್ವನಿಯಾಗಿ ನಾವು ಕೇಳುತ್ತಿದ್ದೇವೆ. ಅನುದಾನ ಲಭ್ಯತೆ ಬಗ್ಗೆ ಮಾಹಿತಿ ಜನರಿಗೆ ಕೊಡಬೇಕು ಎಂದು ಬೊಮ್ಮಾಯಿ ಹೇಳಿದರು.

ಆದಾಯದಲ್ಲಿ ಬದಲಾವಣೆ ತರದಿದ್ದರೆ ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತದೆ. ರಾಜ್ಯವನ್ನು ಆರ್ಥಿಕ ಅಧೋಗತಿಗೆ ತೆಗೆದುಕೊಂಡು ಹೋಗಬಾರದು. ಆದಾಯದ ಸ್ಥೂಲ ಚಿತ್ರಣವನ್ನು ಇಂದು ಕೊಡಬಹುದಿತ್ತು. ಕೊಟ್ಟ ಮಾತನ್ನು ಸಂಪೂರ್ಣವಾಗಿ ನಡೆಸಿಲ್ಲ ಹೇಳುವುದೊಂದು, ಮಾಡುವುದೊಂದು ಮಾಡಿದ್ದಾರೆ ಏನೇನು ಕಡಿತಗೊಳಿಸುತ್ತಾರೋ ನೋಡೋಣ ಎಂದು ಬೊಮ್ಮಾಯಿ ತಿಳಿಸಿದರು.

ರೈತರಿಗೆ ಕೊಡುವುದು ನಿಲ್ಲಿಸಿದರೆ ರೈತರಿಗೆ ಸಂಕಷ್ಟ ಆಗುತ್ತದೆ. ಎಸ್​ಇಪಿಟಿಎಸ್​ಪಿ ಹಣದಲ್ಲಿ ಕಡಿತ ಮಾಡಲಿಕ್ಕಿಲ್ಲ ಅದು ಕೊಡಲೇಬೇಕಾಗುತ್ತದೆ. ಉಚಿತ ಜಾರಿ ಮೂಲಕ ಕಾಂಗ್ರೆಸ್​ ನವರು ತಮ್ಮ ಮಾತು ಉಳಿಸುವ ಅರೆ ಬರೆ ಪ್ರಯತ್ನ ಮಾಡಿದ್ದಾರೆ. ಲೋಕಸಭಾ ಚುನಾವಣೆವರೆಗೆ ಏನಾಗುತ್ತೋ ಗೊತ್ತಿಲ್ಲ. ರೋಡ್ ಹಂಪ್ ಗಳು ಬಹಳಷ್ಟು ಇವೆ, ಎಲ್ಲಿಯವರೆಗೆ ತೆಗೆದುಕೊಂಡು ಹೋಗುತ್ತಾರೆ ಎಂಬುದು ರಾಜಕೀಯ ಇಚ್ಛಾಶಕ್ತಿ‌ ಮತ್ತು ಆರ್ಥಿಕ ಸ್ಥಿತಿ ಮೇಲೆ ನಿರ್ಧಾರವಾಗಲಿದೆ.

ಮೊದಲ ಅಧಿವೇಶನ ಆರಂಭವಾಗುವ ಮೊದಲು ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ಆಗುತ್ತದೆ. ಸ್ಥಾನಕ್ಕೆ ರೇಸ್​ನಲ್ಲಿ ಯಾರೂ ಇಲ್ಲ. ಕಾರ್ಯಕ್ರಮವೊಂದಕ್ಕೆ ಆಮಂತ್ರಿಸುವ ಕಾರಣಕ್ಕಾಗಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ. ಈ ವೇಳೆ ಲೋಕಸಭಾ ಚುನಾವಣಾ ತಯಾರಿ ಬಗ್ಗೆ ಮಾತಾಡಿದ್ದೇವೆ. ನಿನ್ನೆ ಡಿಸಿಎಂ ಡಿ.ಕೆ ಶಿವಕುಮಾರ್​ ಅವರು, ಯಡಿಯೂರಪ್ಪ ಅವರನ್ನು ಭೇಟಿ ಆಗಿದ್ದು, ಸೌಹಾರ್ದಯುತವಾಗಿ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ