Breaking News

ಶಕ್ತಿ-ಗೃಹಲಕ್ಷ್ಮೀ ಯೋಜನೆಗಳು ಮಹಿಳೆಯರ ಸ್ವಾಭಿಮಾನ, ಸಬಲೀಕರಣದ ಸಂಕೇತ | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Spread the love

ಬೆಳಗಾವಿ : ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಮತ್ತು ಗೃಹಲಕ್ಷ್ಮೀ ಯೋಜನೆಗಳು ಮಹಿಳೆಯರ ಸ್ವಾಭಿಮಾನ ಮತ್ತು ಸಬಲೀಕರಣದ ಸಂಕೇತಗಳಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಬಸ್ಸುಗಳ ಲೋಕಾರ್ಪಣೆ ಹಾಗೂ ಬೆಳಗಾವಿ-1ನೇ ಘಟಕದ ನವೀಕರಣ ಕಾಮಗಾರಿಯ ಶಂಕುಸ್ಥಾಪನೆ ಮತ್ತು ಹೊಸದಾಗಿ ನೇಮಕಾತಿ ಹೊಂದಿದ ಸಿಬ್ಬಂದಿಗೆ ಆದೇಶ ಪತ್ರ ವಿತರಣೆ, ಅಪಘಾತ/ಅಪರಾಧ ರಹಿತ ಸೇವೆ ಸಲ್ಲಿಸಿದ ಸಂಸ್ಥೆಯ ಚಾಲನಾ ಸಿಬ್ಬಂದಿಗೆ ಬೆಳ್ಳಿ ಪದಕ ವಿತರಣೆ ಹಾಗೂ ನೂತನ ತಂತ್ರಾಂಶಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಗ್ರಾಮೀಣ ಮಹಿಳೆಯರ ಸಶಕ್ತೀಕರಣಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೊಡುಗೆ ಬಹಳ ದೊಡ್ಡದಿದೆ.

ಗ್ರಾಮೀಣ ಜನರ ಆರ್ಥಿಕ ಸಬಲೀಕರಣಕ್ಕೆ ಕೂಡ ಬಸ್‌ಗಳ ಕೊಡುಗೆ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ.

ಸಾರಿಗೆ ವ್ಯವಸ್ಥೆ ಎಂದರೆ ಕೇವಲ ಒಂದು ಇಲಾಖೆಯ ಕಾರ್ಯವಲ್ಲ, ಅದು ಜನಜೀವನದ ಭಾಗ, ಜನಸಾಮಾನ್ಯರ ಜೀವನಾಡಿ ಇದ್ದಂತೆ. ಕಳೆದ 28 ವರ್ಷಗಳಿಂದ ಈ ಸಂಸ್ಥೆ ಲಕ್ಷಾಂತರ ಜನರ ವಿಶ್ವಾಸವನ್ನು ಗಳಿಸಿದೆ. ಒಬ್ಬ ವಿದ್ಯಾರ್ಥಿನಿಯ ಶಿಕ್ಷಣದ ಕನಸು, ಒಬ್ಬ ಕಾರ್ಮಿಕನ ದುಡಿಯುವ ಬದುಕು ಇವೆಲ್ಲವನ್ನು ಗಮ್ಯಸ್ಥಾನಕ್ಕೆ ಕೊಂಡೊಯ್ಯುವ ಸೇತುವೆಯೇ ನಮ್ಮ ಸಾರಿಗೆ ವ್ಯವಸ್ಥೆ. ಭರವಸೆ, ಸುರಕ್ಷತೆ ಮತ್ತು ಸಮಯಪಾಲನೆಯನ್ನು ಸಾಗಿಸುವ ಸೇವಾ ಸಂಸ್ಥೆ ಎಂದು ಕೊಂಡಾಡಿದ ಸಚಿವರು, ಇಂದು ಲೋಕಾರ್ಪಣೆಯಾಗುತ್ತಿರುವ ನೂತನ ಬಸ್ಸುಗಳು ಕೇವಲ ಹೊಸ ವಾಹನಗಳಲ್ಲ. ಅವು ಅಭಿವೃದ್ಧಿಯ ಚಕ್ರಗಳು. ಗ್ರಾಮದಿಂದ ನಗರಕ್ಕೆ, ನಗರದಿಂದ ಗ್ರಾಮಕ್ಕೆ ಜನರನ್ನು ಸಂಪರ್ಕಿಸುವ ಅಭಿವೃದ್ಧಿಯ ಮಾರ್ಗಗಳು ಎಂದು ಹೇಳಿದರು.

ಒಂದು ಬಸ್ ರಸ್ತೆ ಮೇಲೆ ಓಡುತ್ತಿರುವಾಗ ಅದು ಕೇವಲ ಪ್ರಯಾಣಿಕರನ್ನು ಮಾತ್ರ ಸಾಗಿಸುವುದಿಲ್ಲ, ಅದು ಕನಸುಗಳನ್ನು ಸಾಗಿಸುತ್ತದ, ಆಸೆಗಳನ್ನು ಸಾಗಿಸುತ್ತದೆ, ಬದುಕಿನ ಅವಕಾಶಗಳನ್ನು ಸಾಗಿಸುತ್ತದೆ. ನಮ್ಮ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಮಹಿಳೆಯರ ಬದುಕಿನಲ್ಲಿ ನಿಜವಾದ ಬದಲಾವಣೆ ತಂದಿದೆ. ರಾಜ್ಯದಲ್ಲಿನ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ ಮೂಲಕ, ಅವರ ಆರ್ಥಿಕ ಸ್ವಾವಲಂಬನೆಗೆ ದೊಡ್ಡ ಬೆಂಬಲ ನೀಡಲಾಗಿದೆ. ಇದರಿಂದ ಲಕ್ಷಾಂತರ ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ಭಾರವನ್ನು ಕಡಿಮೆ ಮಾಡುತ್ತಿದ್ದಾರೆ. ಇದರೊಂದಿಗೆ ಗೃಹಲಕ್ಷ್ಮೀ ಯೋಜನೆ ಸಹ ಮಹಿಳೆಯರ ಸ್ವಾಭಿಮಾನಕ್ಕೆ ಕಾರಣವಾಗಿದೆ ಎಂದರು.

ಮಹಿಳಾ ಸಬಲೀಕರಣದ ಸರ್ಕಾರದ ಬದ್ಧತೆಯ ಸಾಕ್ಷಿಯಾಗಿರುವ ಶಕ್ತಿ ಯೋಜನೆ ಯಶಸ್ವಿಯಾಗಲು ಸಾರಿಗೆ ಸಂಸ್ಥೆಯ ಸಿಬ್ಬಂದಿ ಮಹತ್ತರ ಪಾತ್ರ ವಹಿಸಿದ್ದಾರೆ. ಪ್ರತಿ ದಿನ ಲಕ್ಷಾಂತರ ಮಹಿಳೆಯರನ್ನು ಗೌರವದಿಂದ, ಸುರಕ್ಷಿತವಾಗಿ ಸಾಗಿಸುತ್ತಿರುವ ಚಾಲಕರು ಮತ್ತು ನಿರ್ವಾಹಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸಾರಿಗೆ ಸಿಬ್ಬಂದಿಯ ಸೇವಾಭಾವನೆ ಬಿಸಿಲು, ಮಳೆ, ಹಗಲು-ರಾತ್ರಿ ಎಂಬ ವ್ಯತ್ಯಾಸವಿಲ್ಲದೆ ಜನಸೇವೆಯನ್ನು ಮುಂದುವರಿಸುತ್ತಿರುವ ನಮ್ಮ ಸಿಬ್ಬಂದಿ ಕಾರ್ಯ ನಿಜಕ್ಕೂ ಪ್ರಶಂಸನೀಯರು. ಅವರ ಶ್ರಮದಿಂದಲೇ ಈ ಸಂಸ್ಥೆ ಇಷ್ಟು ವರ್ಷಗಳಿಂದ ವಿಶ್ವಾಸವನ್ನು ಗಳಿಸಿದೆ. ನಿಮ್ಮ ಕುಟುಂಬದ ಬಗೆಗೂ ಕಾಳಜಿ ವಹಿಸಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.


Spread the love

About Laxminews 24x7

Check Also

ಜಾತಿ ಮುಕ್ತ ಭಾರತ ಕಟ್ಟಬೇಕಿದೆ: ಸತೀಶ

Spread the loveಬೆಳಗಾವಿ: ‘ಇಂದು ನಾವೆಲ್ಲರೂ ಸೇರಿ ಜಾತಿ ಮುಕ್ತ ಭಾರತ ಕಟ್ಟಬೇಕಿದೆ. ಬಿ.ಆರ್.ಅಂಬೇಡ್ಕರ್, ಬಸವಣ್ಣ ಅವರಂಥ ಮಹನೀಯರ ವಿಚಾರಧಾರೆಗಳು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ