ಬೆಳಗಾವಿ – ಕೊರೋನಾ ಸೋಂಕು ದಿನದಿಂದ ದಿನಕ್ಕೆ ಬೆಳಗಾವಿ ಜಿಲ್ಲೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಇಂದು ಒಂದೇ ದಿನ 14 ಪಾಸಿಟಿವ್ ಪ್ರಕರಣ ಬಂದಿದೆ. ಹಿರೇಬಾಗೇವಾಡಿ ಎನ್ನುವ ಒಂದೇ ಊರಲ್ಲಿ 36 ಪ್ರಕರಣ ದೃಢಪಟ್ಟಿದೆ. ಕುಡಚಿ ಮತ್ತು ಸಂಕೇಶ್ವರ ಪಟ್ಟಣವೂ ನಲುಗಿಹೋಗಿದೆ. ಬೆಳಗಾವಿ ನಗರವನ್ನೂ ಸೋಂಕು ಕಂಗೆಡಿಸಿದೆ.
ಇಂದಿನವರೆಗೆ ಬೆಳಗಾವಿ ಜಿಲ್ಲೆಯಲ್ಲಿ 69 ಜನರಿಗೆ ಪಾಸಿಟಿವ್ ಬಂದಿದೆ. ವಿಶೇಷವೆಂದರೆ ಇವೆಲ್ಲವೂ ತಬ್ಲಿಘಿಗಳ ನಿಜಾಮುದ್ದೀನ್ ನಂಟಿನಿಂದಲೇ ಬಂದಿದ್ದು. ತಬ್ಲಿಘಿ ನಂಟು ಹೊರತಾದ ಒಂದೇ ಒಂದು ಪ್ರಕರಣವೂ ಬೆಳಗಾವಿಯಲ್ಲಿಲ್ಲ. ನಿಜಾಮುದ್ದೀನ್ ಧರ್ಮ ಸಭೆಯಲ್ಲಿ ಇಲ್ಲಿಯ ಜನರು ಪಾಲ್ಗೊಳ್ಳದಿದ್ದರೆ, ಅಥವಾ ಅಲ್ಲಿಂದ ಬಂದವರು ಬೇರೆಯವರ ಸಂಪರ್ಕಕ್ಕೆ ಬರುವ ಮೊದಲೇ ಆರೋಗ್ಯ ತಪಾಣೆ ಮಾಡಿಸಿಕೊಂಡಿದ್ದರೆ ಇಡೀ ಜಿಲ್ಲೆಯ ನೆಮ್ಮದಿ ಕೆಡುವ ಪ್ರಸಂಗ ಬರುತ್ತಿರಲಿಲ್ಲ.
ನಿಜಾಮುದ್ದೀನ್ ನಂಟಿನಿಂದ ಬೇರೆ ಬೇರೆ ಕಡೆ ಕೊರೋನಾ ಸೋಂಕು ಬಂದಿರುವ ಸುದ್ದಿ ಬಂದ ನಂತರವೂ ಇಲ್ಲಿಂದ ಹೋದವರು ತಕ್ಷಣ ಮುಂಜಾಗ್ರತೆ ವಹಿಸಲಿಲ್ಲ. ಬೇರೆಯವರ ಸಂಪರ್ಕಕ್ಕೆ ಬರದೆ ದೂರ ಉಳಿಯಲಿಲ್ಲ. ಇದರಿಂದಾಗಿ ಜಿಲ್ಲೆಯ 45 -50 ಲಕ್ಷ ಜನರು ಸಂಕಷ್ಟಕ್ಕೊಳಗಾಗುವಂತಾಗಿದೆ. ಜನರ ಬದುಕೇ ನರಕವಾದಂತಾಗಿದೆ.
ಕೊರೋನಾ ಸಂಕಷ್ಟದಿಂದಾಗಿ ಜಿಲ್ಲೆಯ ಜನರು ಪಡುತ್ತಿರುವ ಪಾಡು ಹೇಳತೀರದಾಗಿದೆ. ಹಾಗೆ ನೋಡಿದರೆ ಮೊದಲ ಹಲವು ದಿನ ರಾಜ್ಯದ ಅನೇಕ ಕಡೆ ಕೊರೋನಾ ಸೋಂಕು ರುದ್ರ ನರ್ತನ ಮಾಡುತ್ತಿದ್ದರೂ ಬೆಳಗಾವಿಯಲ್ಲಿ ಒಂದೂ ಪ್ರಕರಣ ಕಂಡುಬಂದಿರಲಿಲ್ಲ. ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.
ಆದರೆ ಯಾವಾಗ ನಿಜಾಮುದ್ದೀನ್ ಧರ್ಮ ಸಭೆಯಲ್ಲಿ ಪಾಲ್ಗೊಂಡು ಬಂದವರು ಆಸ್ಪತ್ರೆಗೆ ದಾಖಲಾದರೋ ಆಗ ಬೆಳಗಾವಿ ಕಂಗಾಲಾಯಿತು. ಹಿರೇಬಾಗೇವಾಡಿ, ಕುಡಚಿ, ಬೆಳಗಾವಿ ನಗರ ಸಪೂರ್ಣ ನಿದ್ರಾಹೀನವಾಯಿತು. ಆ ಸಂದರ್ಭದಲ್ಲಾದರೂ ತಬ್ಲಿಘಿಗಳು ಸ್ವಯಂ ಪ್ರೇರಿತರಾಗಿ ಆಸ್ಪತ್ರೆಗೆ ಹೋಗಿದ್ದರೆ ಇಷ್ಟೊಂದು ವ್ಯಾಪಕವಾಗಿ ಹಬ್ಬುತ್ತಿರಲಿಲ್ಲ. ಅನೇಕರು ಅಡಗಿಕೊಂಡರು. ಮಾಹಿತಿಯನ್ನೇ ನೀಡಲಿಲ್ಲ. ಇದು ಇಂತಹ ಪರಿಸ್ಥಿತಿಗೆ ತಂದಿಟ್ಟಿದೆ.
ತಬ್ಲಿಘಿಗಳ ನಂಟಿನಿಂದಲೇ ಜಿಲ್ಲೆಯ ಎಲ್ಲ 69 ಜನರಿಗೆ ಸೋಂಕು ತಗುಲಿರುವುದು ಬಯಲಾಗಿದೆ. ಇನ್ನೂ ಕೆಲವರು ನಿಜಾಮುದ್ದೀನ್ ನಿಂದ ಬಂದರೂ ಜಿಲ್ಲೆಯ ಹೊರಗೆ ಉಳಿದಿದ್ದಾರೆ. ಜಿಲ್ಲಾಡಳಿತಕ್ಕೆ ಸಿಕ್ಕಿರುವ ಇಂತವರ ಸಂಖ್ಯೆ 16. ಇದೇ ಸತ್ಯವೋ ಅಥವಾ ಇನ್ನೂ ಯಾರಿದ್ದಾರೋ ಕಾಲವೇ ಉತ್ತರಿಸಬೇಕಿದೆ.
ಈಗಲಾದರೂ ಅವರ ಸಂಪರ್ಕಕ್ಕೆ ಬಂದವರು ಹೊರಬರಬೇಕು. ಜಿಲ್ಲೆಯ ಲಕ್ಷಾಂತರ ಜನರ ನೆಮ್ಮದಿ ಕೆಡಲು ಕಾರಣರಾಗಬಾರದು. ಸಧ್ಯಕ್ಕೆ ಬೆಳಗಾವಿ ಈ ಸಂಕಷ್ಟದಿಂದ ಹೊರಗೆ ಬರುವುದು ಕಷ್ಟವಿದೆ. ಮುಂದಿನ ದಿನಗಳಲ್ಲಿ ಜನರೇ ತಮ್ಮ ಜೀವನ ಶೈಲಿಯ ಬಗ್ಗೆ ಯೋಚಿಸಬೇಕಿದೆ. ಮನಬಂದಂತೆ ವರ್ತಿಸುವುದನ್ನು, ಮನಬಂದಂತೆ ವ್ಯವಹರಿಸುವುದನ್ನು ಬಿಡಬೇಕು.