ಹೊಸದಿಲ್ಲಿ: ಬ್ರಿಟನ್ ನ ಟಿವಿ ನಿಯಂತ್ರಣ ಪ್ರಾಧಿಕಾರ ಆಫ್ ಕಾಮ್ 20 ಲಕ್ಷ ರೂ. ದಂಡ ವಿಧಿಸಿದ ಬಳಿಕ 280 ಬಾರಿ ಕ್ಷಮೆ ಕೋರುವ ಮೂಲಕ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಸಾರ್ವಜನಿಕರಿಂದ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.
ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭ ಬ್ರಿಟಿಷ್ ಸರಕಾರಕ್ಕೆ ಹಲವು ಬಾರಿ ಕ್ಷಮೆ ಕೋರುವ ಮೂಲಕ ಕಾರಾಗೃಹದಿಂದ ಬಿಡುಗಡೆಗೊಂಡಿದ್ದ ಹಿಂದುತ್ವವಾದಿ ಸಾವರ್ಕರ್ ಅವರಿಗೆ ಗೋಸ್ವಾಮಿಯನ್ನು ಹೋಲಿಸಿರುವ ಜನರು ಕ್ಷಮೆ ಯಾಚನೆಯಲ್ಲಿ ಸಾರ್ವಕರ್ ದಾಖಲೆಯನ್ನು ಗೋಸ್ವಾಮಿ ಮುರಿದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. “ಸಾರ್ವಕರ್ ಬ್ರಿಟಿಷ್ ಸೈನಿಕರಲ್ಲಿ 270 ಬಾರಿ ಕ್ಷಮೆಯಾಚಿಸಿದ್ದರೆ, ಗೋಸ್ವಾಮಿ 280 ಬಾರಿ ಕ್ಷಮೆಯಾಚಿಸಿ ದಾಖಲೆ ಮುರಿದಿದ್ದಾರೆ” ಎಂದು ಜನರು ಟ್ವೀಟಿಸಿದ್ದಾರೆ.
ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಹಿಂದಿ ಚಾನೆಲ್ ‘ರಿಪಬ್ಲಿಕ್ ಭಾರತ’ ದ್ಚೇಷ ಭಾಷಣವನ್ನು ಹಬ್ಬಿಸುವುದರಲ್ಲಿ ತೊಡಗಿಕೊಂಡಿತ್ತೆಂದು ಆಫ್ ಕಾಮ್ ಪ್ರತಿಪಾದಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಗೋಸ್ವಾಮಿ ಅವರ ವಿಷಯ ತೀವ್ರ ಚರ್ಚೆಗೆ ಗುರಿಯಾಗಿತ್ತು.
ರಿಪಬ್ಲಿಕ್ ಟಿವಿ ಮೇಲೆ 20 ಲಕ್ಷ ರೂ. ದಂಡ ವಿಧಿಸಿದ ಸಂದರ್ಭ ಅರ್ನಬ್ ಗೋಸ್ವಾಮಿ ಮಾಲಕತ್ವದ ಚಾನೆಲ್ ಮಾಧ್ಯಮ ಮಾರ್ಗಸೂಚಿಯನ್ನು ಉಲ್ಲಂಘಿಸಿರುವುದಕ್ಕೆ 280 ಬಾರಿ ಕ್ಷಮೆ ಕೋರಿತ್ತು ಎಂದು ಆಫ್ ಕಾಮ್ ಮಾಹಿತಿ ನೀಡಿದೆ.
ಉಲ್ಲಂಘನೆಗೆ ಪರಿಹಾರವಾಗಿ ಹಾಗೂ ತನ್ನ ಎಲ್ಲ ವೀಕ್ಷಕರಿಗೆ ತಮ್ಮ ವಿಷಾದ ವ್ಯಕ್ತಪಡಿಸಲು, ಕ್ಷಮೆ ಪ್ರಸಾರ ಮಾಡಲಾಗುವುದು ಎಂದು ರಿಪಬ್ಲಿಕ್ ಟಿವಿ, ತನಗೆ ಮಾಹಿತಿ ನೀಡಿತ್ತು ಎಂದು ಆಫ್ ಕಾಮ್ ತಿಳಿಸಿದೆ.
2020ರ ಫೆಬ್ರವರಿ 26ರಿಂದ 2020ರ ಎಪ್ರಿಲ್ 9ರ ನಡುವೆ ದಿನದ 24 ಗಂಟೆಗಳ ಕಾಲ ಒಟ್ಟು 280 ಬಾರಿ ಕ್ಷಮೆಯನ್ನು ಪ್ರಸಾರ ಮಾಡಿದ್ದಾಗಿ ಆಫ್ ಕಾಮ್ ತಿಳಿಸಿದೆ.