ಧಾರವಾಡ: ನವಜಾತ ಶಿಶುವಿಗೆ ರಕ್ತ ಸಿಗದಿದ್ದಕ್ಕೆ ನಗರದ ಯುವಕರ ಸಂಘವೊಂದು ಮಸೀದಿಯಲ್ಲೇ ರಕ್ತದಾನ ಶಿಬಿರ ಆರಂಭಿಸಿ ಮಾನವೀಯತೆ ಮೆರೆದಿದೆ.
ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ವೈರಸ್ ಭಯದಿಂದ ರಕ್ತದಾನ ಮಾಡುವುದಕ್ಕೆ ಜನರೇ ಬರುತ್ತಿಲ್ಲ. ಇತ್ತ ರಕ್ತದಾನ ಶಿಬಿರಗಳೇ ನಡೆಯದ ಕಾರಣ ರಕ್ತ ಭಂಡಾರಕ್ಕೆ ತುರ್ತು ರಕ್ತದ ಅವಶ್ಯಕತೆ ಎದುರಾಗಿತ್ತು. ಇದನ್ನು ಮನಗಂಡ ನಗರದ ಜಕಣೀಬಾವಿ ಬಳಿಯ ಮಹಮ್ಮದ್ ಮಸೀದಿಯ ಜಮಾತ್ ಅಹಲೆ ಹದೀಸ್ ಟ್ರಸ್ಟ್ ಕೈ ಜೋಡಿಸಿ ರಕ್ತದಾನ ಶಿಬಿರ ನಡೆಸಿದೆ.

ಮಸೀದಿಯ ಆವರಣದಲ್ಲಿಯೇ ರಕ್ತದಾನ ಶಿಬಿರ ನಡೆಸಲಾಗಿದ್ದು, 90 ಜನರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಜನಿಸಿರುವ ಮಗುವೊಂದು ಕೇವಲ 900 ಗ್ರಾಂ ಮಾತ್ರ ತೂಕ ಹೊಂದಿತ್ತು. ಆ ಮಗುವಿಗೆ ತುರ್ತು ರಕ್ತದ ಅಗತ್ಯವೂ ಎದುರಾಗಿತ್ತು. ಮಸೀದಿಯಲ್ಲಿ ನಡೆದ ರಕ್ತದಾನ ಶಿಬಿರದಿಂದ ಮಗುವಿನ ಜೀವ ಉಳಿಸುವುದಕ್ಕೂ ಸಹಾಯವಾಗಿದೆ ಎಂದು ಜಿಲ್ಲಾ ರಕ್ತ ಭಂಡಾರದ ಮುಖ್ಯಸ್ಥರು ಹೇಳಿದ್ದಾರೆ. ಅಲ್ಲದೇ ಹಲವು ರೋಗಿಗಳಿಗೆ ಈ ರಕ್ತದಾನದಿಂದ ಸಹಾಯವಾಗಲಿದೆ ಎಂದು ವೈದ್ಯ ಡಾ.ಅಚ್ಯುತ್ ಹೇಳಿದರು.

Laxmi News 24×7