ಚೆನ್ನೈ: 9ನೇ ತರಗತಿಯ ಬಾಲಕನೊಬ್ಬನ ಅಪಹರಣ ಪ್ರಕರಣ ಪೊಲೀಸರು ಹಾಗೂ ಆ ಬಾಲಕನ ಪಾಲಕರನ್ನೇ ದಂಗಾಗಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಬಾಲಕನನ್ನು ಅಪಹರಣ ಮಾಡಿ 10 ಲಕ್ಷ ರೂಪಾಯಿ ಬೇಡಿಕೆ ಇಟ್ಟಿರುವ ಫೋನ್‌ಕರೆ ಆಧಾರದ ಮೇಲೆ ಬೆನ್ನಟ್ಟಿಹೋದ ಪೊಲೀಸರಿಗೆ ಅಪಹರಣಕಾರರನ್ನು ನೋಡಿ ದಂಗಾಗಿರುವ ಘಟನೆ ಇದಾಗಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಈ ಬಾಲಕನ ತಂದೆ ದ್ವಿಚಕ್ರ ವಾಹನ ಪರಿಕರಗಳ ಅಂಗಡಿಯನ್ನು ನಡೆಸುತ್ತಿದ್ದಾರೆ. ಅವರ ಮಗ ಟ್ಯೂಷನ್‌ಗೆ ಹೋಗಿದ್ದ. ಅಲ್ಲಿಂದಲೇ ಆತ ನಾಪತ್ತೆಯಾಗಿದ್ದ. ನಂತರ ಮಗನೇ ಅಪ್ಪನಿಗೆ ಕರೆ ಮಾಡಿ, ನನ್ನನ್ನು ಅಪಹರಿಸಿಕೊಂಡು ಹೋಗಲಾಗಿದೆ. 10 ಲಕ್ಷ ರೂಪಾಯಿ ಬೇಡಿಕೆ ಒಡ್ಡುತ್ತಿದ್ದಾರೆ. ಅದನ್ನು ಕೊಟ್ಟರೆ ಮಾತ್ರ ನನ್ನನ್ನು ಬಿಡುಗಡೆ ಮಾಡುತ್ತಾರೆ ಎಂದು ಜೋರಾಗಿ ಅಳುತ್ತಾ ಹೇಳಿದ.
ಇತ್ತ ಅಪ್ಪ ದಂಗಾಗಿ ಹೋದರು. ಕೂಡಲೇ ತಡಮಾಡದೇ ಪೊಲೀಸ್ ಠಾಣೆಗೆ ಧಾವಿಸಿದ ಅವರು, ದೂರು ದಾಖಲು ಮಾಡಿದರು. ತಡ ಮಾಡದ ಪೊಲೀಸರ ತಂಡ ಅಪಹರಣಕಾರರನ್ನು ಹುಡುಕುವ ಕೆಲಸ ಶುರು ಮಾಡಿತು. ಮೊಬೈಲ್ ಫೋನ್ ಬಂದ ಸಂಖ್ಯೆಯ ಟವರ್ ಆಧಾರದ ಮೇಲೆ ಪೊಲೀಸರು ಬೆನ್ನಟ್ಟಿ ಹೋದಾಗ ಬಾಲಕ ಅಲ್ಲಿಯೇ ಕಂಡ.
ಪೊಲೀಸರು ಧಾವಿಸಿ ಬಾಲಕನನ್ನು ರಕ್ಷಿಸಿದರು. ಆದರೆ ಆ ಬಾಲಕ ಮಾತ್ರ ರಕ್ಷಣೆ ಮಾಡಿದ ಮೇಲೂ ಅಪಹರಣಕಾರರು 10 ಲಕ್ಷ ರೂಪಾಯಿ ಬೇಡಿಕೆ ಒಡ್ಡುತ್ತಿದ್ದಾರೆ ಎಂದು ಹೇಳುತ್ತಲೇ ಇದ್ದ. ಬಚಾವಾಗಿ ಬಂದಿರುವ ಖುಷಿ ಅವನ ಮುಖದಲ್ಲಿ ಇರಲಿಲ್ಲ.
ಇದರಿಂದ ಸಂದೇಹಗೊಂಡ ಪೊಲೀಸರು ಸಿಸಿಟಿವಿ ತರಿಸಿ ನೋಡಿದರು. ಅದರಲ್ಲಿ ಈ ಬಾಲಕ ಇನ್ನೊಬ್ಬ ಹುಡುಗನ ಜತೆ ಆಟೊದಲ್ಲಿ ಹೋಗಿರುವುದು ಕಂಡುಬಂತು. ನಂತರ ಆ ಆಟೊ ಚಾಲಕನನ್ನು ಹುಡುಕಿ ವಿಷಯ ಕೇಳಿದಾಗ, ಈ ಇಬ್ಬರು ಬಾಲಕರು ಆಯಪ್‌ನಲ್ಲಿ ತಮ್ಮ ಆಟೊ ಬುಕ್ ಮಾಡಿ ಹೋಗಿರುವುದಾಗಿ ಹೇಳಿದ.
ಸಂದೇಹ ಬಲವಾದ ಹಿನ್ನೆಲೆಯಲ್ಲಿ ಪೊಲೀಸರು ಬಾಲಕನನ್ನು ವಿಚಾರಿಸಿದರು. ಆಗ ಆತ ಹೇಳಿದ್ದು ಕೇಳಿ ಬಾಲಕನ ಪಾಲಕರೂ ದಂಗಾಗಿಹೋದರು. ಏಕೆಂದರೆ ಅಪ್ಪನಿಂದ 10 ಲಕ್ಷ ರೂಪಾಯಿ ವಸೂಲಿ ಮಾಡುವ ಉದ್ದೇಶದಿಂದ ಈ ಬಾಲಕನೇ ತನ್ನ ಅಪಹರಣದ ನಾಟಕವಾಡಿದ್ದ. ಫೋನ್ ಮಾಡಿದ ಮೇಲೆ ಅಪ್ಪ ದುಡ್ಡು ಕೊಟ್ಟ ನಂತರ, ಅದರಿಂದ ಮಜಾ ಮಾಡಬಹುದು ಎಂದುಕೊಂಡಿದ್ದ.
ಆದರೆ ಎಲ್ಲವೂ ಉಲ್ಟಾ ಆಯಿತು! ಬಾಲಕನಿಗೆ ಎಚ್ಚರಿಕೆ ನೀಡಿ ಪೊಲೀಸರು ಆತನನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ.