ನವದೆಹಲಿ: 2020-21ನೇ ಸಾಲಿನಲ್ಲಿ ನೌಕರರ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.8.5ರಷ್ಟನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ನೌಕರರ ಭವಿಷ್ಯ ನಿಧಿ ಮಂಡಳಿ(ಇಪಿಎಫ್ ಒ) ಗುರುವಾರ (ಮಾರ್ಚ್ 04) ನಿರ್ಧರಿಸಿದೆ.
ಇಂದು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅಧ್ಯಕ್ಷತೆಯಲ್ಲಿ ನಡೆದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ಸಭೆಯಲ್ಲಿ ಇಪಿಎಫ್ ಬಡ್ಡಿದರವನ್ನು ಯಥಾಸ್ಥಿತಿ ಮುಂದುವರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
2016-17ನೇ ಸಾಲಿನಲ್ಲಿ ಇಪಿಎಫ್ ಒ ನೌಕರರ ಭವಿಷ್ಯ ನಿಧಿ ಠೇವಣಿಗೆ ಶೇ.8.65ರಷ್ಟು ಬಡ್ಡಿದರ ಹಾಗೂ 2017-18ನೇ ಸಾಲಿನಲ್ಲಿ ಶೇ.8.55ರಷ್ಟು ಬಡ್ಡಿದರ ನೀಡಿದ್ದು, 2015-16ರಲ್ಲಿ ಶೇ.8.8 ಬಡ್ಡಿದರ ನೀಡಿತ್ತು. 2019-20ರಲ್ಲಿ ಇಪಿಎಫ್ ಮೇಲಿನ ಬಡ್ಡಿದರವನ್ನು ಶೇ.8.5ಕ್ಕೆ ಇಳಿಸಿತ್ತು. ಇದು ಕಳೆದ 7ವರ್ಷಗಳಲ್ಲಿ ಕನಿಷ್ಠ ಪ್ರಮಾಣದ್ದಾಗಿತ್ತು.
ನೌಕರರ ಭವಿಷ್ಯ ನಿಧಿ(ಇಪಿಎಫ್) ಬಡ್ಡಿದರವನ್ನು ನೌಕರರ ಭವಿಷ್ಯ ನಿಧಿ ಮಂಡಳಿ ಕಡಿತಗೊಳಿಸುವ ಸಾಧ್ಯತೆ ಇದೆ ಎಂಬ ವದಂತಿ ದಟ್ಟವಾಗಿ ಹರಿದಾಡಿತ್ತು. ಹಾಲಿ ನೌಕರರಿಗೆ ಶೇ.8.5ರಷ್ಟು ಬಡ್ಡಿದರ ಸಿಗುತ್ತಿದ್ದು, ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ವರ್ಷ ಭಾರೀ ಪ್ರಮಾಣದಲ್ಲಿ ನೌಕರರು ಇಪಿಎಫ್ ಹಣವನ್ನು ಹಿಂಪಡೆದಿದ್ದರು. ಇದರಿಂದಾಗಿ ಇಪಿಎಫ್ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು.